ಅನುಭವ ಮಂಟಪ ಪುನಶ್ಚೇತನಕ್ಕೆ ಸರಕಾರ ಬದ್ಧ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-04-26 16:48 GMT

ಬೆಂಗಳೂರು, ಎ. 26: ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನವರ ಅನುಭವ ಮಂಟಪ ಪುನಶ್ಚೇತನಕ್ಕೆ ಬದ್ಧವಾಗಿದ್ದು, ಈಗಾಗಲೇ ಇದಕ್ಕಾಗಿ ರಾಜ್ಯ ಸರಕಾರ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.

ರವಿವಾರ ಬಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೆ ಶತಮಾನದಲ್ಲಿ ಸಮ ಸಮಾಜದ ಕನಸನ್ನು ಬಿತ್ತಿದ್ದ ಬಸವಣ್ಣನವರು 'ಕಾಯಕವೇ ಕೈಲಾಸ' ಎಂದು ಶ್ರಮದ ಮಹತ್ವವನ್ನು ದೇಶದ ಜನರಿಗೆ ಸಾರಿದರು ಎಂದು ಸ್ಮರಣೆ ಮಾಡಿದರು.

ಬಸವಣ್ಣನವರ ರಚಿಸಿರುವ ವಚನ ಸಾಹಿತ್ಯ ಸಮಾನತೆ, ಕಾಯಕ ಮತ್ತು ದಾಸೋಹದ ಮಹತ್ವವನ್ನು ಸಾರುತ್ತದೆ. ಅವರು ರಚಿಸಿದ ವಚನಗಳು ಎಲ್ಲ ಕಾಲಕ್ಕೂ ಪ್ರಸ್ತುತ ಮತ್ತು ಶ್ರೇಷ್ಠವಾದವು. ಬಸವಣ್ಣನವರು ಹನ್ನೆರಡನೆ ಶತಮಾನದಲ್ಲೆ ಸ್ಥಾಪಿಸಿದ ಅನುಭವ ಮಂಟಪ ಆಧುನಿಕ ಸಂಸದೀಯ ವ್ಯವಸ್ಥೆಯ ಮೂಲ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

ಬಡವ-ಶ್ರೀಮಂತ, ಪುರುಷ, ಮಹಿಳೆ, ಮೇಲ್ಜಾತಿ ಮತ್ತು ಕೆಳಜಾತಿ ಎಂಬ ಯಾವುದೇ ಭಿನ್ನಭೇದವಿಲ್ಲದೆ ಎಲ್ಲರೂ ಒಂದೇ ವೇದಿಕೆಯಲ್ಲಿ ಕೂರಿಸುವ ಮೂಲಕ ತಮ್ಮ ಅನುಭವ ಹಂಚಿಕೊಳ್ಳಲು ಬಸವಣ್ಣ ಅಂದೇ ಅವಕಾಶ ನೀಡಿದ್ದರು. ಅಲ್ಲದೆ, ಸಮಾನತೆಯ ಸಂದೇಶವನ್ನು ದೇಶಕ್ಕೆ ಸಾರಿದ್ದರು ಎಂದು ಯಡಿಯೂರಪ್ಪ ತಿಳಿಸಿದರು.

ಬಸವಣ್ಣನವರ ವಚನ ಸಾಹಿತ್ಯದ ತತ್ವ, ಸಿದ್ಧಾಂತಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಶರಣರ ತತ್ವಗಳನ್ನು ಎಲ್ಲರೂ ಉಳ್ಳವರು, ಬಡವರು ಎಂಬ ತಾರತಮ್ಯ ಮನೋಭಾವನೆ ದೂರಮಾಡುವ ಮೂಲಕ ಬಸವಣ್ಣನವರ ಜಯಂತಿ ಆಚರಣೆಗೆ ನಿಜವಾದ ಅರ್ಥ ಕಲ್ಪಿಸಬೇಕು ಎಂದು ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ಅಣ್ಣ ಬಸವಣ್ಣನವರು 900 ವರ್ಷಗಳ ಹಿಂದೆಯೆ ವರ್ಗ, ವರ್ಣ, ಜಾತಿ, ಧರ್ಮ, ಲಿಂಗಭೇದಗಳಿಂದ ಮುಕ್ತರಾಗಿ ಮಾನವ ಏಕತೆಯನ್ನು ಸಾಧಿಸಬೇಕು ಎನ್ನುವ ಸಂದೇಶವನ್ನು ಸಾರಿದ್ದಾರೆ. ಅದಕ್ಕಾಗಿ ಅವರು ಅಪರಿಮಿತ ಪರಿಶ್ರಮ ಪಟ್ಟಿದ್ದಾರೆ ಎಂದು ಹೇಳಿದರು.

ಕಾಯಕ ಜೀವಿಗಳಿಗಾಗಿ, ದುಡಿಯುವ ವರ್ಗಕ್ಕಾಗಿ, ನೊಂದವರ ಏಳ್ಗೆಗಾಗಿ ಬಸವ ನಾಡಿನಲ್ಲಿ ಹುಟ್ಟಿದ್ದು, ಈ ಧರ್ಮ. ಈ ಧರ್ಮವನ್ನು ಉಳಿಸಿ-ಬೆಳೆಸಬೇಕಿದೆ. ಇದು ಪ್ರತಿಯೊಬ್ಬರ ಮನೆಯ ಧರ್ಮ ಆಗಬೇಕು. ಬಸವಣ್ಣನವರ ತತ್ವ-ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಬಸವ ಜಯಂತಿ ಒಂದು ದಿನಕ್ಕೆ ಸೀಮಿತವಾಗಬಾರದು ಎಂದು ಕಾರಜೋಳ ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಚಿತ್ರದುರ್ಗ ಮುರುಘ ಮಠದ ಡಾ.ಶಿವಮೂರ್ತಿ ಮುರುಘ ಶರಣರು ಸೇರಿದಂತೆ ಇನ್ನಿತರರು ಹಾಜರಿದ್ದರು.

'ಶೋಷಣೆ ರಹಿತ ಸಮಾನತೆಯ ಸಮಾಜಕ್ಕಾಗಿ ಹೋರಾಡಿದ ಬಸವೇಶ್ವರರ ಆದರ್ಶಗಳು ಉತ್ತಮ ಮಾರ್ಗದಲ್ಲಿ ನಡೆಸಲು ಇರುವ ಜಗತ್ತಿಗೇ ಪ್ರಸ್ತುತವಾಗಿದ್ದು, ಮಾನವ ಕುಲಕ್ಕೆ ಜಾತ್ಯತೀತ ಸಂವಿಧಾನವನ್ನು ಬಸವಣ್ಣನವರು ತಮ್ಮ ವಚನಗಳ ಮೂಲಕ ನೀಡಿದ್ದಾರೆ. ಸಮಸ್ತ ಜನತೆಗೆ ವಿಶ್ವಗುರು ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು'

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

ಬಡವರು, ಶೋಷಿತರು, ಜಾತಿ ತಾರತಮ್ಯದಿಂದ ನರಳಿದವರು, ಮಹಿಳೆಯರು ಹೀಗೆ ಅನ್ಯಾಯಕ್ಕೀಡಾದ ಸಮುದಾಯದ ಪರವಾಗಿ ಹೋರಾಡಿದ ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣನೇ ನಿನ್ನೆ-ಇಂದು-ನಾಳೆಯೂ ನನ್ನ ಕೈಹಿಡಿದು ನಡೆಸುವ ವೈಚಾರಿಕ ಗುರು. ಬಸವ ಜಯಂತಿಯ ದಿನ ಆ ಚೇತನಕ್ಕೆ ಭತ್ತಿಯ ನಮನಗಳು

-ಸಿದ್ದರಾಮಯ್ಯ, ವಿಪಕ್ಷ ನಾಯಕ

ಎಲ್ಲರನ್ನು ಸಮಾನವಾಗಿ ಕಾಣುತ್ತಾ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ಹಸಿದವರಿಗೆ ಊಟ ನೀಡುತ್ತಾ ಎಲ್ಲರೂ ಬಸವ ಜಯಂತಿಯನ್ನು ಆಚರಿಸೋಣ. ನಮ್ಮ ನಾಡು ಕಂಡ ಅಪ್ರತಿಮ ಕಾಯಕಯೋಗಿ ಬಸವಣ್ಣನವರ ಜಯಂತ್ಯೋತ್ಸವ ನಾಡಿಗೆ ಸುಖವನ್ನು ತರಲಿ, ದೇಶದಲ್ಲಿ ನೆಮ್ಮದಿ ಮನೆ ಮಾಡಲಿ. ಎಲ್ಲರಿಗೂ ಬಸವ ಜಯಂತಿಯ ಹಾರ್ದಿಕ ಶುಭಾಶಯಗಳು

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News