ಆತ್ಮಹತ್ಯೆಗೈಯಲು 17ನೆ ಮಹಡಿ ಏರಿದ ಯುವತಿಯ ರಕ್ಷಣೆ
ಬೆಂಗಳೂರು, ಎ.26: ಯುವತಿಯೊಬ್ಬಳು ನಗರದ ಅಪಾರ್ಟ್‍ಮೆಂಟ್‍ನ 17ನೆ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ವೇಳೆ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ.
ಹೊಸದಿಲ್ಲಿ ಮೂಲದ ಗೀತಾ(ಹೆಸರು ಬದಲಾಯಿಸಲಾಗಿದೆ) ಎಂಬಾಕೆಯನ್ನು ಎಲೆಕ್ಟ್ರಾನಿಕ್ ಸಿಟಿಯ ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಅಪಾರ್ಟ್‍ಮೆಂಟ್‍ನ ತನ್ನ ಸಂಬಂಧಿಕರ ಮನೆಗೆ ಬಂದಿದ್ದ ಗೀತಾ, ಲಾಕ್‍ಡೌನ್ ಹಿನ್ನೆಲೆ ಹೊಸದಿಲ್ಲಿಗೆ ವಾಪಸ್ ಹೋಗಿರಲಿಲ್ಲ. ಶನಿವಾರ ಮಧ್ಯರಾತ್ರಿ ಏಕಾಏಕಿ ಅಪಾರ್ಟ್‍ಮೆಂಟ್‍ನ 17ನೆ ಮಹಡಿಗೆ ಏರಿ ಕುಳಿತಿದ್ದಳು. ನಂತರ ಭಯದಲ್ಲಿ ಕಿಟಕಿಯ ಕೆಳ ಭಾಗದಲ್ಲಿ ಹೆದರಿ ಕುಳಿತಿದ್ದಳು. ಇದನ್ನು ಅಪಾರ್ಟ್‍ಮೆಂಟ್‍ನ ಸದಸ್ಯರು ಗಮನಿಸಿ, ತಕ್ಷಣ ಅವರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಆಕೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚಿಗೆ ಗೀತಾ ಅವರ ತಾಯಿ ಮೃತಪಟ್ಟಿದ್ದು, ಇದರಿಂದ ನೊಂದು ಆಕೆ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.