ಎಲ್‍ಪಿಜಿ ಅನಿಲ ಸಿಲಿಂಡರ್ ಖರೀದಿಗೆ ಶೀಘ್ರ ನೀತಿ ರೂಪಿಸಿ: ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಎ.26: ಹಣ ಪಾವತಿಸಲು ಸಾಧ್ಯವಾಗದ ಕುಟುಂಬಗಳಿಗೆ ಎಲ್‍ಪಿಜಿ ಅನಿಲ ಸಿಲಿಂಡರ್ ಖರೀದಿಸಲು ಸಹಾಯ ಧನ ನೀಡುವ ಬಗ್ಗೆ ಶೀಘ್ರ ನೀತಿ ರೂಪಿಸಿ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿತು.
ಸರಕಾರದ ಪರ ವಾದಿಸಿದ ವಕೀಲರು, ಎಲ್‍ಪಿಜಿ ಸಂಪರ್ಕ ಹೊಂದಿದರೂ ಸಿಲಿಂಡರ್ ಗೆ ಹಣ ಪಾವತಿಸಲಾಗದ ಸ್ಥಿತಿಯಲ್ಲಿ ಇರುವವರಿಗೆ ಉಚಿತವಾಗಿ ಸಿಲಿಂಡರ್ ಪೂರೈಸಲು ಕಷ್ಟವಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಪ್ರಧಾನ ಮಂತ್ರಿ ಉಜ್ವಲ ಹಾಗೂ ಮುಖ್ಯಮಂತ್ರಿ ಅನಿಲ್ ಭಾಗ್ಯ ಯೋಜನೆಗಳಿಗೆ ಒಳಪಡದ ಬಡವರಿಗೆ ಒಂದು ಬಾರಿ ಕ್ರಮದಂತೆ ಸಿಲಿಂಡರ್ ಖರೀದಿಸಲು ಸಹಾಯಧನ ನೀಡುವ ನಿಟ್ಟಿನಲ್ಲಿ ನೀತಿ ರೂಪಿಸಿ ನಿರ್ಣಯ ಕೈಗೊಳ್ಳಬೇಕೆಂದು ಸೂಚಿಸಿತು.
ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿ ರಾಜ್ಯದಲ್ಲಿ 1.60 ಕೋಟಿ ಕುಟುಂಬಗಳು ಎಲ್‍ಪಿಜಿ ಸಂಪರ್ಕ ಹೊಂದಿವೆ.