×
Ad

ಕೊರೋನ ಶಂಕೆಯಿಂದ ನವದಂಪತಿಗೆ ಮನೆ ಮಾಲಕನಿಂದ ಕಿರುಕುಳ: ಆರೋಪ

Update: 2020-04-27 22:33 IST

ಬೆಂಗಳೂರು, ಎ.27: ಮನೆಗೆ ತಡವಾಗಿ ಬಂದಿರುವುದನ್ನೇ ನೆಪವಾಗಿಟ್ಟುಕೊಂಡು ನಿಮಗೆ ಕೊರೋನ ಸೋಂಕು ಬಂದಿರುವ ಶಂಕೆ ಇದೆ ಎಂದು ಹೇಳಿ ನವದಂಪತಿಗೆ ಕಿರುಕುಳ ಕೊಟ್ಟ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿರುವ ರಂಗ ಮತ್ತು ಪತ್ನಿ ಪವಿತ್ರ ಅವರು ಕಿರುಕುಳಕ್ಕೊಳಗಾಗಿದ್ದು, ನಿಮಗೆ ಕೊರೋನ ಸೋಂಕು ಬಂದಿರುವ ಶಂಕೆ ಇದೆ ಎಂದು ಹೇಳಿ ಗೇಟ್‍ನ ಬೀಗವನ್ನು ತೆರೆಯದೇ ಹೊರಗಡೆ ನಿಲ್ಲಿಸಿರುವ ಘಟನೆ ನಡೆದಿದೆ ಎನ್ನಲಾಗಿದೆ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸ ಇಲ್ಲದ ಕಾರಣ ಬಾಗಲಗುಂಟೆಯ ಪರಿಚಯಸ್ಥರು ಇದ್ದ ಬಾಡಿಗೆ ಮನೆಯಲ್ಲಿಯೇ ರಂಗ ಮತ್ತು ಪತ್ನಿ ಪವಿತ್ರ ಇಬ್ಬರೂ ಉಳಿದುಕೊಂಡಿದ್ದರು. ಆದರೆ, ರವಿವಾರ ಮನೆಗೆ ರಾತ್ರಿ 11 ಗಂಟೆಗೆ ಬಂದಿದ್ದಾರೆ. ಈ ವೇಳೆ ಮನೆ ಮಾಲಕ ಶಿವಣ್ಣ ಅವರು ರಂಗ ಮತ್ತು ಪತ್ನಿ ಪವಿತ್ರ ಅವರನ್ನು ಮನೆಯೊಳಗೆ ಕರೆದುಕೊಳ್ಳದೇ ನಿಮಗೆ ಕೊರೋನ ಬಂದಿರುವ ಶಂಕೆ ಇದ್ದು, ಪರೀಕ್ಷೆ ಮಾಡಿಸಿಕೊಂಡು ವರದಿಯನ್ನು ತಂದು ತೋರಿಸಿ ಆಮೇಲೆ ಮನೆಯೊಳಗೆ ಕರೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಕೊನೆಗೆ ನವದಂಪತಿ ರಾತ್ರಿಯಡೀ ಕಾರಿನಲ್ಲೇ ಮಲಗಿದ್ದಾರೆ. ಈ ಜೋಡಿ ಮದುವೆಯಾಗಿ ಇನ್ನೂ ಒಂದು ತಿಂಗಳಾಗಿದೆ. ಲಾಕ್‍ಡೌನ್‍ನಿಂದಾಗಿ ಕ್ಯಾಬ್ ಕೆಲಸವೂ ಇಲ್ಲದೇ, ಚಾಲಕ ರಂಗ ಬಾಗಲಗುಂಟೆಯಲ್ಲಿ ಮನೆ ಮಾಡಿ ಊಟಕ್ಕಾಗಿ ಬೇರೆಯವರ ಮನೆಯನ್ನು ಆಶ್ರಯಿಸಿದ್ದರು. ಇಂತಹ ಕಷ್ಟದಲ್ಲಿದ್ದರೂ ಮನೆ ಮಾಲಕನ ದುರ್ವರ್ತನೆಗೆ ನೊಂದ ನವದಂಪತಿ, ಕೆಲ ಸಂಘಟನೆಗಳ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ದಂಪತಿ ನೆರವಿಗೆ ಧಾವಿಸಿರುವ ಕೆಲ ಸಂಘಟನೆ ಹಾಗೂ ಪೊಲೀಸರು, ಮಾಲಕನ ಜೊತೆ ಮಾತುಕತೆ ನಡೆಸಿ ಆತನಿಂದಲೇ ಹಣ ವಸೂಲಿ ಮಾಡಿ ದಂಪತಿಗೆ ನೀಡಿದ್ದಾರೆ. ಅಡ್ವಾನ್ಸ್ ಹಾಗೂ ಎರಡು ತಿಂಗಳ ಬಾಡಿಗೆ ಹಣವನ್ನು ಮಾಲಕನಿಂದಲೇ ಕೊಡಿಸಿ ಆ ಮನೆ ಖಾಲಿ ಮಾಡಿಸಿದ್ದಾರೆ. ಅಲ್ಲದೆ, ದಂಪತಿಗೆ ಬೇರೊಂದು ಮನೆ ಹುಡುಕಿ ಕೊಟ್ಟು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News