ಎ.30ಕ್ಕೆ ಸಚಿವ ಸಂಪುಟ ಸಭೆ
ಬೆಂಗಳೂರು, ಎ. 28: ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣ, ಹಾಟ್‍ಸ್ಪಾಟ್‍ಗಳಲ್ಲಿ ಲಾಕ್‍ಡೌನ್ ಮುಂದುವರಿಕೆ ಹಾಗೂ ಹಸಿರು ವಲಯಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಿಸುವ ಸಂಬಂಧ ಚರ್ಚೆ ನಡೆಸಲು ಎ.30ರಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದೆ.
ಎ.30ರ ಬೆಳಗ್ಗೆ 11ಗಂಟೆಗೆ ವಿಧಾನಸೌಧದ ಮೂರನೆ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂಪುಟದ ಎಲ್ಲ ಸಹೊದ್ಯೋಗಿಗಳು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಮೇ 3ಕ್ಕೆ ಲಾಕ್‍ಡೌನ್ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಲಾಕ್‍ಡೌನ್ ವಿಸ್ತರಣೆ, ಹಳದಿ ಮತ್ತು ಹಸಿರು ವಲಯಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚಿಸುವುದು ಹಾಗೂ ಅಂತರ್ ಜಿಲ್ಲೆ ಸಾರಿಗೆ ವಾಹನ ಸಂಚಾರ ಆರಂಭಿಸುವ ಬಗ್ಗೆ ಚರ್ಚಿಸುವ ಸಾಧ್ಯತೆಗಳಿವೆ.
ಸುದೀರ್ಘ ಅವಧಿಯ ಲಾಕ್‍ಡೌನ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಂಪನ್ಮೂಲ ಕೊರತೆ ಎದುರಾಗಿದ್ದು, ರಾಜ್ಯ ಸರಕಾರಿ ನೌಕರರ ವೇತನ ಕಡಿತ, ಕುಬೇರ ಉದ್ಯಮಿಗಳಿಂದ ಕೊರೋನ ತೆರಿಗೆ ಸಂಗ್ರಹ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಮುಂದಿನ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆಂದು ಗೊತ್ತಾಗಿದೆ.