ಬೆಂಗಳೂರು: ಬಡವರ ಕಷ್ಟಕ್ಕೆ ಸ್ಪಂದಿಸಿದ ಐಟಿ ಉದ್ಯೋಗಿಗಳು

Update: 2020-04-28 16:58 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.28: ದೇಶದಾದ್ಯಂತ ಲಾಕ್‍ಡೌನ್‍ನಿಂದಾಗಿ ದುಡಿಯುವ ವರ್ಗ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ನಿರ್ಗತಿಕರು, ಅಸಹಾಯಕರಿಗೂ ಕೊರೋನ ಲಾಕ್‍ಡೌನ್ ಬಿಸಿ ತಟ್ಟಿದ್ದು, ಅದರ ಪರಿಣಾಮದಿಂದ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.

ಸರಕಾರದಿಂದ ಪಡಿತರ ಚೀಟಿ ಇದ್ದವರಿಗೆ ಅಕ್ಕಿ ಹಾಗೂ ಗೋದಿಯನ್ನಷ್ಟೇ ನೀಡುತ್ತಿದೆ. ಇನ್ನುಳಿದಂತೆ ಯಾವುದೇ ಯೋಜನೆಗಳೂ ಗ್ರಾಮೀಣ ಭಾಗದವರಿಗೆ ಸಿಗುತ್ತಿಲ್ಲ. ಇನ್ನು, ಪಡಿತರ ಚೀಟಿಗಳೇ ಇಲ್ಲದವರ ಸ್ಥಿತಿಯಂತೂ ಹೇಳಲಾರದ ಪರಿಸ್ಥಿತಿಯಿದೆ. ತುತ್ತು ಅನ್ನಕ್ಕಾಗಿ ದುಡಿದು ತಿನ್ನುತ್ತಿದ್ದವರು ಹಾಗೂ ವಯಸ್ಸಾದವರು ಲಾಕ್‍ಡೌನ್‍ನಿಂದ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿನ ಐಟಿ ಕಂಪೆನಿಯ ಉದ್ಯೋಗಿಗಳು ಹಣ ಹೊಂದಿಸಿ ಸ್ವಯಂ ಸೇವಕರ ಮೂಲಕ 1,000 ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ನೀಡಿದ್ದಾರೆ. ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಮಾತ್ರ ಜನರ ಕಷ್ಟಕ್ಕೆ ಸ್ಪಂದನೆ ನೀಡುತ್ತಿದ್ದಾರೆ ಎನ್ನುತ್ತಿದ್ದ ಸಂದರ್ಭದಲ್ಲಿಯೇ ಇಲ್ಲೊಂದು ಐಟಿ ಕಂಪೆನಿ ಉದ್ಯೋಗಿಗಳ ತಂಡ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿದೆ.

ಇದೀಗ ಐಟಿ ಕಂಪೆನಿಗಳ ಉದ್ಯೋಗಿಗಳಿಗೆ ಬರುತ್ತಿರುವ ಸಂಬಳದಲ್ಲಿ ಶೇ.30ರಷ್ಟು ಕಡಿತಗೊಳ್ಳುತ್ತಿದೆ ಎಂಬ ಆತಂಕದ ನಡುವೆಯೂ ಐಟಿ ಕಂಪೆನಿ ಉದ್ಯೋಗಿಗಳು ಮಾನವೀಯತೆ ಮೆರೆದಿದ್ದಾರೆ. ಈ ಮೂಲಕ ಹಳ್ಳಿಗಳಲ್ಲಿ ಹಸಿದವರಿಗೆ, ಒಂಟಿ ಮಹಿಳೆಯರ ಕುಟುಂಬಗಳಿಗೆ, ಕೂಲಿ ಕಾರ್ಮಿಕರಿಗೆ, ದುಡಿಯುವ ಜನರಿಗೆ, ವಲಸೆ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. ಅದನ್ನು ಸ್ಥಳೀಯ ಸ್ವಯಂ ಸೇವಕರು ಅರ್ಹರನ್ನು ಮಾತ್ರ ಗುರುತಿಸಿ ಅವರಿಗೆ ತಲುಪುವಂತೆ ಸಾಕಷ್ಟು ಶ್ರಮಿಸಿದ್ದಾರೆ.

ಹಣ ಸಂಗ್ರಹ ಹೇಗೆ ?

ಅಗತ್ಯವಿರುವವರಿಗೆ ಆಹಾರಧಾನ್ಯ ನೀಡಬೇಕೆಂಬ ಉದ್ದೇಶದಿಂದ ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಐಟಿ ಕಂಪೆನಿಯ ಉದ್ಯೋಗಿ ನವೀನ್ ಸಂಪತ್ ಕೃಷ್ಣ ಎಂಬುವವರು ತಮ್ಮ ಸಹದ್ಯೋಗಿಗಳೊಂದಿಗೆ ವಾಟ್ಸಪ್ ಮೂಲಕ ಚರ್ಚಿಸಿ ಹಣ ಸಂಗ್ರಹಿಸಿದ್ದಾರೆ. ಈ ಕಾರ್ಯಕ್ಕೆ 135 ಜನರು ಕೈ ಜೋಡಿಸಿದ್ದು, ಅದರಲ್ಲಿ 100ಕ್ಕೂ ಅಧಿಕ ಜನರು ಐಟಿ ಉದ್ಯೋಗಿಗಳಾಗಿರುವುದೇ ವಿಶೇಷವಾಗಿದೆ. ಇವರೆಲ್ಲರೂ ತಮ್ಮ ಸಂಬಳದಲ್ಲಿ ಶೇ. 10, 20ರಂತೆ ಹಣ ನೀಡಿದ್ದಾರೆ. ಈ ಹಣದಿಂದ ಅಕ್ಕಿ, ಬೇಳೆ, ರಾಗಿ ಹಿಟ್ಟು, ಅಡುಗೆ ಎಣ್ಣೆ, ಸೋಪು ಹಾಗೂ ಅಗತ್ಯ ವಸ್ತುಗಳು ಸೇರಿದಂತೆ ಸ್ಯಾನಿಟೈಸರ್, ಮಾಸ್ಕ್ ಗಳನ್ನು ಕೊಂಡು ಸ್ವಯಂ ಸೇವಕರ ಮೂಲಕ ಹಂಚಿಕೆ ಮಾಡಿದ್ದಾರೆ.

ಮೂರು ತಾಲೂಕಿನ ಗ್ರಾಮಗಳಲ್ಲಿ ಹಂಚಿಕೆ: ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಆಹಾರದ ಹಾಹಾಕಾರ ಶುರುವಾಗಿದ್ದು, ಇದನ್ನರಿತ ಸ್ವಯಂ ಸೇವಕರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು, ಚಿಕ್ಕಮಗಳೂರು ತಾಲೂಕಿನ ಗ್ರಾಮಗಳಲ್ಲಿ ಸಂಚರಿಸಿ ಬಡವರು, ಕೂಲಿ ಕಾರ್ಮಿಕರ ಪಟ್ಟಿ ಸಿದ್ಧಪಡಿಸಿ ಹಂಚಿಕೆ ಮಾಡಿದ್ದಾರೆ.

ಚಿಂತಾಮಣಿಯಲ್ಲಿ ರಾಮಕ್ಕ ಬಿಲ್ಡಿಂಗ್ ಯೂಥ್ ಗ್ರೂಪ್, ಚಿಕ್ಕಮಗಳೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಕೆ.ಆರ್. ರವಿ, ಹಿರಿಯೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಎಂ. ಈಶ್ವರಪ್ಪ ಎಂಬುವರ ಮೂಲಕ ಹಂಚಿಕೆ ಕಾರ್ಯ ನಡೆದಿದೆ. ಈವರಗೆ 1,230 ರೂ. ಮೌಲ್ಯದ 600 ಆಹಾರಧಾನ್ಯಗಳ ಕಿಟ್ ವಿತರಿಸಲಾಗಿದೆ. ಈ ಕಾರ್ಯ ಇನ್ನೂ ಮುಂದುವರಿದಿದೆ.

ಸರಕಾರದ ಸೌಲಭ್ಯ ದೊರೆಯುತ್ತಿಲ್ಲ: ಲಾಕ್‍ಡೌನ್‍ನಿಂದಾಗಿ ಪಡಿತರ, ಹಾಲು ವಿತರಣೆಯಂತಹ ಯೋಜನೆಗಳು ಜಾರಿಯಲ್ಲಿದ್ದರೂ, ಈ ಯಾವ ಸೌಲಭ್ಯಗಳೂ ಜನರಿಗೆ ದೊರಕುತ್ತಿಲ್ಲ. ಜನಪ್ರತಿನಿಧಿಗಳು ತಮ್ಮವರು, ತಮ್ಮ ಪಕ್ಷದವರು, ತಮಗೆ ಬೇಕಾದವರಿಗಷ್ಟೇ ಸಹಾಯ ಮಾಡುತ್ತಿದ್ದಾರೆ. ಮನೆಯಲ್ಲಿ ವಿದ್ಯುತ್ ಇಲ್ಲ. ಊಟ ಮಾಡಲು ರೇಷನ್ ಇಲ್ಲ. ಕೈಗೆ ಕೆಲಸವಿಲ್ಲ. ಇಂತಹ ಸಂದರ್ಭದಲ್ಲಿ ಜೀವನ ನಡೆಸುವುದೇ ತೊಂದರೆಯಾಗಿದೆ ಎಂದು ಸ್ವಯಂ ಸೇವಕರ ಮುಂದೆ ತಿಮ್ಮಕ್ಕ ಎಂಬುವವರು ಅಳಲು ತೋಡಿಕೊಂಡರು.

ಐಟಿ ಉದ್ಯೋಗಿಗಳ ಕಾರ್ಯಕ್ಕೆ ಶ್ಲಾಘನೆ: ತಮ್ಮ ಸಮಸ್ಯೆಗಳ ನಡುವೆಯೂ ಜನರಿಗೆ ಅನುಕೂಲವಾಗಲೆಂದು ಹಣ ಸಂಗ್ರಹಿಸಿ, ಸ್ವಯಂ ಸೇವಕರ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದು, ಈ ಕಾರ್ಯಕ್ಕೆ ಗ್ರಾಮಗಳ ಜನರು, ಜನಪ್ರತಿನಿಧಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ದುಡಿಯುತ್ತಿದ್ದ ನಮಗೆ ಕೊರೋನ ರೋಗ ಹರಡಿದ ಬಳಿಕ ಲಾಕ್‍ಡೌನ್ ಆಗಿದೆ. ಇದರಿಂದ ಎಲ್ಲಿಯೂ ಕೂಲಿ ಕೆಲಸ ಸಿಗುತ್ತಿಲ್ಲ. ಈ ಹಿಂದೆ ಕೂಲಿಗೆ ಹೋದರೆ ದಿನಕ್ಕೆ 500-600 ಸಂಪಾದನೆ ಮಾಡುತ್ತಿದ್ದೆವು. ಇದರಿಂದ ಹೇಗೋ ಹಾಗೆ ಜೀವನವನ್ನು ನಡೆಸುತ್ತಿದ್ದೆವು. ಈಗ ಇವರು ಕೊಟ್ಟಿದ್ದಾರೆ, ಅವರನ್ನು ದೇವರು ಕಾಪಾಡಲಿ.

-ಲಕ್ಷ್ಮಿದೇವಮ್ಮ, ಕಿಟ್ ಪಡೆದ ಮಹಿಳೆ

ಈ ಹಿಂದೆ ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದೆವು. ಆದರೆ, ಲಾಕ್‍ಡೌನ್‍ನಿಂದಾಗಿ ಎಲ್ಲಿಯೂ ಕೂಲಿ ಸಿಗುತ್ತಿಲ್ಲ, ಯಾರೂ ಕೂಲಿಗೆ ಕರೆಯುತ್ತಿಲ್ಲ. ಊಟ ತಿನ್ನೋದಕ್ಕೆ ಕಷ್ಟವಾಗುತ್ತಿದೆ. ಇಲ್ಲಿ ಗುಡಿಸಲುಗಳನ್ನು ಹಾಕಿಕೊಂಡಿದ್ದೇವೆ ಎಂದು ನಮ್ಮನ್ನು ಕಡೆಗಣಿಸಿದ್ದಾರೆ.

-ಮುನೆಮ್ಮ, ಮೈಲಾಪುರ, ಆಹಾರ ಕಿಟ್ ಪಡೆದ ಮಹಿಳೆ

ಕಿಟ್‍ನಲ್ಲಿ ಏನೇನಿದೆ?

ಅಕ್ಕಿ 10 ಕೆ.ಜಿ., ರಾಗಿ 5 ಕೆ.ಜಿ., ತೊಗರಿ ಬೇಳೆ 500 ಗ್ರಾಮ್, ಅವರೇಕಾಳು 250 ಗ್ರಾಮ್, ಕಡಲೇಕಾಳು 250 ಗ್ರಾಮ್, ಅಡುಗೆಎಣ್ಣೆ 500 ಗ್ರಾಮ್, ಮಸಾಲಾ ಪೌಡರ್, ಸಾಬೂನು ಸೇರಿ ಇತ್ಯಾದಿ ಸಾಮಾನು ಹೊಂದಿರುವ 1,230 ರೂ. ಕಿಟ್ ಅನ್ನು ಸಿದ್ಧಪಡಿಸಿ ನಿರ್ಗತಿಕರು, ಬಡವರು, ಕೂಲಿ ಕಾರ್ಮಿಕರ ಮನೆಗಳಿಗೆ ವಿತರಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ರಾಮಕ್ಕ ಬಿಲ್ಡಿಂಗ್ ಯೂಥ್‍ಗ್ರೂಪ್‍ನ ಶಶಿರಾಜ್ ಹರತಲೆ ಹೇಳಿದ್ದಾರೆ.

ಕೊರೋನ ಭೀತಿ ಹಿನ್ನೆಲೆ ಲಾಕ್‍ಡೌನ್ ಘೋಷಿಸಲಾಗಿದ್ದು, ಬಡ ಕುಟುಂಬಗಳು ಒಂದೊತ್ತಿನ ಊಟಕ್ಕೂ ಪರಿತಪ್ಪಿಸುತ್ತಿವೆ. ಈ ಬಗ್ಗೆ ಕೆಲ ಸ್ನೇಹಿತರು ತಿಳಿಸಿದ್ದು, ನಮ್ಮಿಂದಾದ ಸಹಾಯ ಮಾಡಬೇಕೆಂದು ಐಟಿ ಸ್ನೇಹಿತರ ಜತೆ ಚರ್ಚಿಸಿ ಹಣ ಸಂಗ್ರಹಿಸಿದೆವು. ಸ್ವಯಂ ಸೇವಕರ ಮೂಲಕ ಇದುವರೆಗೂ 1,000 ಕಿಟ್‍ಗಳನ್ನು ಬಡವರ ಮನೆಗೆ ತೆರಳಿ ನೀಡಲಾಗಿದೆ. ಇದರಿಂದ ಆತ್ಮತೃಪ್ತಿ ಸಿಕ್ಕಂತಾಗಿದೆ.

-ನವೀನ್ ಸಂಪತ್ ಕೃಷ್ಣ, ಮಾನ್ಯತಾ ಟೆಕ್ ಪಾರ್ಕ್‍ನಲ್ಲಿರುವ ಐಟಿ ಕಂಪೆನಿ ಉದ್ಯೋಗಿ

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News