ಬಿಸಿಯೂಟ ನೌಕರರ ಸಂಭಾವನೆ ಹೆಚ್ಚಿಸಲು ಕೇಂದ್ರಕ್ಕೆ ಸುರೇಶ್ ಕುಮಾರ್ ಆಗ್ರಹ

Update: 2020-04-28 17:02 GMT

ಬೆಂಗಳೂರು, ಎ.28: ಮಧ್ಯಾಹ್ನ ಉಪಾಹಾರ ಯೋಜನೆಯಲ್ಲಿ ಕೆಲಸ ಮಾಡುವ ಅಡುಗೆ ಸಹಾಯಕರು ಅತಿ ಕನಿಷ್ಟ ಸಂಭಾವನೆಯಲ್ಲಿ ದುಡಿಯುತ್ತಿರುವುದರಿಂದ ಈ ನೌಕರರಿಗೆ ನೀಡುವ ಕೇಂದ್ರದ ಪಾಲನ್ನು ಹೆಚ್ಚಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.

ಮಂಗಳವಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಕ್ರಿಯಾಲ್ ನಡೆಸಿದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾಥಮಿಕ ಶಿಕ್ಷಣ ಸಚಿವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಸಿಯೂಟ ಯೋಜನೆ ಆರಂಭವಾದಾಗ ಕೇಂದ್ರ ಸರಕಾರ ನೀಡುತ್ತಿದ್ದ ಪಾಲಿನ ಮೊತ್ತವೆ ಈಗಲೂ ಮುಂದುವರೆದಿದ್ದು, ರಾಜ್ಯ ಸರಕಾರ ಮಾತ್ರವೆ ತನ್ನ ಪಾಲನ್ನು ಹೆಚ್ಚಿಸಿದೆ. ಕೇಂದ್ರವು ಮೊದಲಿನಿಂದಲೂ ನೀಡುತ್ತಿದ್ದ 600 ರೂ.ಮಾತ್ರವೆ ಈಗಲೂ ಮುಂದುವರಿದಿದೆ ಎಂದು ಅವರು ಹೇಳಿದರು.

ಕೇಂದ್ರದ ಪಾಲು ಹೆಚ್ಚಳ ಆಗದೆ ಇರುವುದರಿಂದ ಬಿಸಿಯೂಟ ನೌಕರರು ತೀವ್ರ ಸಂಕಷ್ಟದಿಂದ ಬದುಕುವಂತಾಗಿದೆ. ಆದುದರಿಂದ, ಕೇಂದ್ರದ ಪಾಲನ್ನು ಆದಷ್ಟು ಶೀಘ್ರವೇ ಹೆಚ್ಚಿಸಬೇಕು ಎಂದು ಸುರೇಶ್ ಕುಮಾರ್ ಒತ್ತಾಯಿಸಿದರು.

ಬೇಸಿಗೆ ರಜೆ ಅವಧಿಯಲ್ಲಿಯೂ ಮಧ್ಯಾಹ್ನ ಉಪಾಹಾರ ಯೋಜನೆಯನ್ನು ವಿಸ್ತರಿಸಲು ನಿರ್ಧರಿಸಿರುವ ಕೇಂದ್ರದ ಕ್ರಮ ಶ್ಲಾಘನೀಯ. ರಾಜ್ಯ ಸರಕಾರವು ಈಗಾಗಲೆ ತನ್ನ ಪಾಲಿನ ಅನುದಾನದಲ್ಲಿ ರಜಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಪಡಿತರವನ್ನು ವಿತರಿಸುತ್ತಿರುವ ಅಂಶವನ್ನು ಸುರೇಶ್ ಕುಮಾರ್ ಕೇಂದ್ರ ಸಚಿವರ ಗಮನಕ್ಕೆ ತಂದರು.

ಕೋವಿಡ್ ಸೃಷ್ಟಿಸಿರುವ ಹೊಸ ಜೀವನ ಶೈಲಿಯನ್ನು ಸಮರ್ಥವಾಗಿ ಎದುರಿಸಲು ಶೈಕ್ಷಣಿಕ ವ್ಯವಸ್ಥೆಯಲ್ಲಿ ತಂತ್ರಜ್ಞಾನಾಧಾರಿತವಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆಯಿದ್ದು, ಕೇಂದ್ರ ಸರಕಾರವು ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ಸಹಕಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯ ಸರಕಾರವು ಈಗಾಗಲೆ ವಿದ್ಯಾರ್ಥಿಗಳ ಉಪಯೋಗಕ್ಕಾಗಿ ದೂರದರ್ಶನದ ಚಂದನ ವಾಹಿನಿಯಲ್ಲಿ ಪುನರ್‍ಮನನ ತರಗತಿಗಳನ್ನು ಹಾಗೂ ಯೂ-ಟ್ಯೂಬ್ ಚಾನೆಲ್‍ನಲ್ಲಿ ಮಕ್ಕಳ ಸಮೃದ್ಧ ಕಲಿಕೆಗೆ ವೇದಿಕೆ ಸೃಷ್ಟಿಸಿದೆ ಎಂದು ಅವರು ಹೇಳಿದರು.

ಲಾಕ್‍ಡೌನ್ ಮುಂದುವರಿಕೆಯಿಂದ ಮುಂದಿನ ಶೈಕ್ಷಣಿಕ ಸಾಲಿನ ಪಠ್ಯಕ್ರಮವನ್ನು ಪರಿಷ್ಕರಿಸಲು ಶಿಕ್ಷಣ ಇಲಾಖೆ ನಿರ್ಣಯಿಸಿದ್ದು, ಶಿಕ್ಷಕರ ಸಮಿತಿಗಳ ಮೂಲಕ ಇಂತಹ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಕೇಂದ್ರ ಪಠ್ಯಕ್ರಮದ ಶಾಲೆಗಳಿಗೂ ಮುಂಬರುವ ಸಾಲಿನ ಪಠ್ಯಕ್ರಮವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಕ್ರಮವಹಿಸಿ ದೇಶಾದ್ಯಂತ ಸಮಾನ ಶೈಕ್ಷಣಿಕ ವ್ಯವಸ್ಥೆಯನ್ನು ಜಾರಿಯಲ್ಲಿಡಬೇಕಾದ ಅಗತ್ಯವನ್ನು ಸುರೇಶ್‍ ಕುಮಾರ್ ಒತ್ತಿ ಹೇಳಿದರು.

ಲಾಕ್‍ಡೌನ್ ನಂತರ ಎಸೆಸೆಲ್ಸಿ ಪರೀಕ್ಷೆ: ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ಶಿಕ್ಷಣ ಸಚಿವರು ಎಸೆಸೆಲ್ಸಿ ಪರೀಕ್ಷೆಯ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು, ಕರ್ನಾಟಕ ಸರಕಾರವು ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳನ್ನು ಲಾಕ್‍ಡೌನ್ ಬಳಿಕ ನಡೆಸಲು ಎಲ್ಲ ಪೂರ್ವ ಸಿದ್ಧತೆಗಳನ್ನು ಕೈಗೊಂಡಿದೆ ಎಂದು ಅವರು ವಿವರಿಸಿದರು.

ಸಮಗ್ರ ಶಿಕ್ಷಣ ಕರ್ನಾಟಕಕ್ಕೆ ಕೇಂದ್ರ ಸರಕಾರವು ಬಿಡುಗಡೆ ಮಾಡಬೇಕಾದ ಅನುದಾನವನ್ನು ಶೀಘ್ರ ನೀಡಲು ಕೋರಿದ ಸುರೇಶ್ ಕುಮಾರ್, ನೀತಿ-ನಿರೂಪಣಾ ಮಂಡಳಿಯ ಅನುಮೋದನೆ ಕಾಯ್ದಿರಿಸಿ ಕೇಂದ್ರ ಸರಕಾರವು ರಾಜ್ಯಗಳಿಗೆ ಅನುದಾನ ಬಿಡುಗಡೆಗೆ ಮುಂದಾಗಿರುವ ಕ್ರಮಕ್ಕೆ ಧನ್ಯವಾದ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News