ಕೊರೋನ ವೈರಸ್ ಮತ್ತು ಮೂತ್ರಪಿಂಡಗಳ ಆರೋಗ್ಯ

Update: 2020-04-28 17:22 GMT

ದಿನಗಳು ಕಳೆದಂತೆ ಕೊರೋನ ವೈರಸ್ ಬಗ್ಗೆ ಹೊಸ ಹೊಸ ಮಾಹಿತಿಗಳು ಅನಾವರಣಗೊಳ್ಳುತ್ತಲೇ ಇವೆ. ಸಾಂಕ್ರಾಮಿಕ ರೋಗದ ರೂಪದಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ಕೊರೋನ ವೈರಸ್ ಸೋಂಕನ್ನು ಕೆಲವೇ ವಾರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್-19 ಜಾಗತಿಕ ಪಿಡುಗು ಎಂದು ಘೋಷಿಸಿತ್ತು. ಈ ಪಿಡುಗಿನಿಂದಾಗಿ ಇಡೀ ವಿಶ್ವವೇ ತಲ್ಲಣಿಸಿದ್ದು,ಸಾವುಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ ಮತ್ತು ನಿತ್ಯ ಸಾವಿರಾರು ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಳ್ಳುತ್ತಲೇ ಇದೆ.

ಈ ವೈರಸ್‌ನಿಂದ ತೀವ್ರ ಒತ್ತಡಕ್ಕೆ ಸಿಲುಕಿರುವ ಆರೋಗ್ಯ ರಕ್ಷಣೆ ಕ್ಷೇತ್ರವು ರೋಗಿಗಳ ಚಿಕಿತ್ಸೆಗೆ ಅಗತ್ಯವಾದ ಪ್ರಮುಖ ಉಪಕರಣಗಳ ಕೊರತೆಯನ್ನು ಎದುರಿಸುತ್ತಿದೆ. ಆರಂಭದಲ್ಲಿ ಕೇವಲ ವೆಂಟಿಲೇಟರ್‌ಗಳ ಕೊರತೆಯಿತ್ತು,ಆದರೆ ಈಗ ಡಯಾಲಿಸಿಸ್‌ಯಂತ್ರಗಳ ಕೊರತೆಯೂ ಕಂಡು ಬರುತ್ತಿದೆ. ಭಾಗಶಃ ಕೊರೋನ ವೈರಸ್ ರೋಗಿಗಳಲ್ಲಿ ಮೂತ್ರಪಿಂಡಗಳು ಹಾನಿಗೀಡಾಗಿರುವುದು ಇದಕ್ಕೆ ಕಾರಣವಾಗಿದೆ.

ಲಭ್ಯ ವರದಿಗಳಂತೆ ವಿಶ್ವಾದ್ಯಂತ ಆಸ್ಪತ್ರೆಗಳು ಪಿಪಿಇ, ವೆಂಟಿಲೇಟರ್ ಮತ್ತು ಡಯಾಲಿಸಿಸ್ ಯಂತ್ರಗಳು ಸೇರಿದಂತೆ ಪ್ರಮುಖ ವೈದ್ಯಕೀಯ ಉಪಕರಣಗಳ ಕೊರತೆಯನ್ನು ಎದುರಿಸುತ್ತಿವೆ. ಕೊರೋನ ವೈರಸ್ ಮೂತ್ರಪಿಂಡಗಳಿಗೂ ಹಾನಿಯನ್ನುಂಟು ಮಾಡುತ್ತಿರುವಂತೆ ಕಂಡು ಬರುತ್ತಿದೆ. ಡಯಾಲಿಸಿಸ್ ಯಂತ್ರಗಳಿಗೆ ದಿಢೀರ್ ಬೇಡಿಕೆ ಹೆಚ್ಚುತ್ತಿರುವುದು ಈ ಮಾತಿಗೆ ಪುಷ್ಟಿ ನೀಡುತ್ತಿದೆ.

ಕೊರೋನ ವೈರಸ್ ಮೂತ್ರಪಿಂಡಗಳ ಮೇಲೆ ದಾಳಿ ನಡೆಸುತ್ತಿದೆಯೇ?

ಕೊರೋನ ವೈರಸ್ ಈಗ ಉಸಿರಾಟ ವ್ಯವಸ್ಥೆ ಮತ್ತು ಶ್ವಾಸಕೋಶಗಳ ಸಮಸ್ಯೆಯನ್ನುಂಟು ಮಾಡುವ ಜೊತೆಗೆ ಮೂತ್ರಪಿಂಡಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿರುವಂತೆ ಕಂಡು ಬರುತ್ತಿದೆ. ಕೊರೋನ ವೈರಸ್ ಸೋಂಕಿನ ಗಂಭೀರ ಪ್ರಕರಣಗಳಲ್ಲಿ ಮೂತ್ರಪಿಂಡಗಳಿಗೆ ಹಾನಿಯುಂಟಾಗುತ್ತಿದ್ದು,ಇದು ರೋಗಿಯನ್ನು ಸಾವಿನ ಅಂಚಿಗೆ ತಳ್ಳುತ್ತಿದೆ. ಆದರೆ ವೈರಸ್ ನೇರವಾಗಿ ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತದೆಯೇ ಅಥವಾ ಮೂತ್ರಪಿಂಡಗಳಿಗೆ ಹಾನಿಯು ವೈರಸ್ ಶರೀರಕ್ಕುಂಟು ಮಾಡುವ ಒಟ್ಟು ಹಾನಿಯ ಭಾಗವಾಗಿದೆಯೇ ಎಂಬ ಬಗ್ಗೆ ಕೆಲವೊಂದು ವಿಷಯಗಳು ಇನ್ನೂ ಅಸ್ಪಷ್ಟವಾಗಿವೆ.

ಕೊರೋನ ವೈರಸ್ ಮೂತ್ರಪಿಂಡಗಳ ಮೇಲೆ ನೇರವಾಗಿ ದಾಳಿ ನಡೆಸುತ್ತಿರಬಹುದು ಎಂದು ಸಂಶೋಧನೆಯೊಂದು ಬೆಟ್ಟು ಮಾಡಿದೆ. ಮೂತ್ರಪಿಂಡಗಳ ಮೇಲ್ಮೈಗಳಲ್ಲಿ ಆ್ಯಂಜಿಯೊಟೆನ್ಸಿನ್-ಕನ್ವರ್ಟಿಂಗ್ ಎಂಜೈಮ್ 2 ಅಥವಾ ಎಸಿಎ2 ಗ್ರಾಹಕಗಳು ವಿಫುಲವಾಗಿದ್ದು,ಕೆಲವು ಕೊರೋನ ವೈರಸ್‌ಗಳು ಈ ಎಂಜೈಮ್‌ಗಳ ಮೂಲಕ ಜೀವಕೋಶಗಳನ್ನು ಪ್ರವೇಶಿಸಬಹುದು ಮತ್ತು ಮೂತ್ರಪಿಂಡಗಳಿಗೆ ಹಾನಿಯನ್ನುಂಟು ಮಾಡುತ್ತವೆೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

ಚೀನಾದ ವುಹಾನ್‌ನಲ್ಲಿ 85 ಕೊರೋನ ವೈರಸ್ ರೋಗಿಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಈ ಸಂಶೋಧನೆಯಲ್ಲಿ ಶೇ.27ಕ್ಕೂ ಅಧಿಕ ರೋಗಿಗಳಲ್ಲಿ ಮೂತ್ರಪಿಂಡ ವೈಫಲ್ಯ ಕಂಡುಬಂದಿದೆ. ಸಂಶೋಧನಾ ವರದಿಯು ಅಮೆರಿಕನ್ ಜರ್ನಲ್ ಆಫ್ ಕಿಡ್ನಿ ಡಿಸೀಸಿಸ್‌ನಲ್ಲಿ ಪ್ರಕಟವಾಗಿದೆ.

ಮೂತ್ರಪಿಂಡಗಳು ನಮ್ಮ ಶರೀರದಲ್ಲಿಯ ರಕ್ತವನ್ನು ಸೋಸುತ್ತವೆ ಮತ್ತು ತ್ಯಾಜ್ಯಗಳು ಹಾಗೂ ವಿಷವಸ್ತುಗಳನ್ನು ಶರೀರದಿಂದ ಹೊರಕ್ಕೆ ಹಾಕುತ್ತವೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ವ್ಯಕ್ತಿಯು ತೀವ್ರ ಮೂತ್ರಪಿಂಡ ಸೋಂಕನ್ನು ಹೊಂದಿದ್ದು ಮತ್ತು ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದಾಗ ರಕ್ತ ಶುದ್ಧೀಕರಣ ಕಾರ್ಯವನ್ನು ಡಯಾಲಿಸಿಸ್ ಯಂತ್ರಗಳ ಮೂಲಕ ನಡೆಸಲಾಗುತ್ತದೆ. ಮೂತ್ರಪಿಂಡಗಳು ವಿಫಲಗೊಂಡಿರುವ ರೋಗಿಗಳ ಪಾಲಿಗೆ ಈ ಯಂತ್ರಗಳು ಜೀವರಕ್ಷಕಗಳಾಗಿವೆ. ಆದರೆ ಇಂದು ವಿಶ್ವಾದ್ಯಂತ ದೇಶಗಳು ಈ ಯಂತ್ರಗಳ ಕೊರತೆಯನ್ನು ಎದುರಿಸುತ್ತಿವೆ.

ಭಾರತಕ್ಕೆ ಸಂಬಂಧಿಸಿದಂತೆ ಮಾತನಾಡುವುದಾದರೆ 2019ರ ವರದಿಯೊಂದರಂತೆ ದೇಶದಲ್ಲಿ ಶೇ.10ರಷ್ಟು ಜನರು ಒಂದಲ್ಲ ಒಂದು ವಿಧದ ಮೂತ್ರಪಿಂಡ ರೋಗದಿಂದ ನರಳುತ್ತಿದ್ದಾರೆ. ಪ್ರತಿ ವರ್ಷ ಐದನೇ ಹಂತದ ದೀರ್ಘಕಾಲಿಕ ಕಿಡ್ನಿ ರೋಗದಿಂದ ಬಳಲುತ್ತಿರುವ ಸುಮಾರು ಎರಡು ಲಕ್ಷ ಹೊಸ ಮೂತ್ರಪಿಂಡ ರೋಗ ಪ್ರಕರಣಗಳು ವರದಿಯಾಗುತ್ತಿವೆ. ಈ ಹಂತದಲ್ಲಿರುವ ರೋಗಿಗಳಿಗೆ ತಕ್ಷಣದ ಡಯಾಲಿಸಿಸ್ ಅಗತ್ಯವಾಗಿರುತ್ತದೆ. ಇದೇ ಕಾರಣದಿಂದಾಗಿ ಕೊರೋನ ವೈರಸ್ ಭಾರತದಾದ್ಯಂತ ಇನ್ನಷ್ಟು ಹರಡಿದರೆ ಅದು ಮೂತ್ರಪಿಂಡ ರೋಗಿಗಳಿಗೆ ಹೆಚ್ಚು ಅಪಾಯಕಾರಿಯಾಗುತ್ತದೆ ಎಂದು ವೈದ್ಯಕೀಯ ತಜ್ಞರು ಅಭಿಪ್ರಾಯಿಸಿದ್ದಾರೆ. ಈ ದಿನಗಳಲ್ಲಿ ಭಾರತವು ವೈದ್ಯಕೀಯ ಉಪಕರಣಗಳ ಕೊರತೆಯನ್ನೂ ಎದುರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ದಿಢೀರನೆ ಭಾರೀ ಸಂಖ್ಯೆಯಲ್ಲಿ ಡಯಾಲಿಸಿಸ್ ಯಂತ್ರಗಳ ಪೂರೈಕೆ ಬೃಹತ್ ಸವಾಲು ಆಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News