ಎಚ್ಚರ...ಬೆಂಗಳೂರಿನಲ್ಲಿನ್ನು ಕಸದೊಂದಿಗೆ ಮಾಸ್ಕ್ ಸೇರಿಸಿ ಕೊಟ್ಟರೆ ಬೀಳಲಿದೆ ದಂಡ

Update: 2020-04-29 11:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.29: ಕಸದೊಂದಿಗೆ ಬಳಕೆ ಮಾಡಿದ ಮಾಸ್ಕ್ ಗಳನ್ನು ಸೇರಿಸಿ ಕೊಡುವವರಿಗೆ 500 ರೂ. ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಡಿ.ರಂದೀಪ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಹಸಿ ಕಸ, ಒಣ ಕಸ ಪ್ರತ್ಯೇಕಿಸಿ ಕೊಡುವಂತೆ ಮಾಸ್ಕ್ ಗಳನ್ನು ಸ್ಯಾನಿಟರಿ ತ್ಯಾಜ್ಯವೆಂದು ಪರಿಗಣಿಸಿ ಪ್ರತ್ಯೇಕವಾಗಿ ನೀಡಬೇಕು ಎಂದು ಹೇಳಿದರು.

ತ್ಯಾಜ್ಯದೊಂದಿಗೆ ಮಾಸ್ಕ್ ಗಳನ್ನು ಮಿಶ್ರಣ ಮಾಡಿ ಕೊಟ್ಟರೆ ಮೊದಲ ಬಾರಿ 500 ರೂ. ದಂಡ ಜೊತೆಗೆ ಆ ಮನೆಯ ಕಸವನ್ನು ಪಡೆಯುವುದಿಲ್ಲ. ಎರಡನೇ ಬಾರಿಗೂ ಇದು ಮುಂದುವರಿದರೆ 1 ಸಾವಿರದಿಂದ 2 ಸಾವಿರ ರೂ ದಂಡ ಮತ್ತು ಕಸ ಸ್ವೀಕರಿಸುವುದಿಲ್ಲ ಎಂದು ತಿಳಿಸಿದರು.

ಕೊರೋನ ಸಂದರ್ಭದಲ್ಲಿ ತ್ಯಾಜ್ಯ ವಿಂಗಡಣೆ ಮಾಡುವುದು ಸವಾಲಾಗಿ ಪರಿಣಮಿಸಿದ್ದು, ತ್ಯಾಜ್ಯದ ಜೊತೆಯಲ್ಲಿ ಮಿಶ್ರಣವಾಗಿ ಬರುತ್ತಿರುವ ಮಾಸ್ಕ್ ಗಳ ವಿಂಗಡಣೆ ಮಾಡುವ ಪೌರಕಾರ್ಮಿಕರಲ್ಲಿ ಆತಂಕಕ್ಕೆ ಕಾರಣವಾಗಬಾರದು. ಅಲ್ಲದೇ, ಮಾಸ್ಕ್ ಗಳನ್ನು ಕಡ್ಡಾಯವಾಗಿ ಸುಡಬೇಕು. ಮಾಸ್ಕ್ ಅನ್ನು ರಿಸೈಕ್ಲಿಂಗ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ನಿರ್ಧಾರ ಅತ್ಯಗತ್ಯವಾಗಿದೆ. ಸ್ಯಾನಿಟರಿ ವಸ್ತುಗಳನ್ನು ಪ್ರತ್ಯೇಕಿಸಿ ಕೊಡುವಂತೆ ಸೂಚನೆ ನೀಡಿದರೂ ಕೆಲವರು ಪಾಲಿಸುತ್ತಿಲ್ಲ. ಹೀಗಾಗಿ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಿಸುವ ಪ್ರತಿಯೊಬ್ಬ ಆಟೋ ಚಾಲಕನಿಗೂ ಪಿಪಿಇ ಕಿಟ್‍ನ್ನು ಬಿಬಿಎಂಪಿಯೇ ನೀಡಿದೆ. ನಿತ್ಯ ಎರಡು ಮಾಸ್ಕ್ ಹಾಗೂ ಸ್ಯಾನಿಟೈಸರ್ ನೀಡಲಾಗುತ್ತಿದೆ. ಇದರ ಸಂಪೂರ್ಣ ವೆಚ್ಚವನ್ನು ಬಿಬಿಎಂಪಿಯೇ ಭರಿಸುತ್ತಿದೆ. ಲಾಕ್‍ಡೌನ್‍ನಿಂದಾಗಿ ನಗರದಲ್ಲಿ ತ್ಯಾಜ್ಯ ಉತ್ಪತ್ತಿ ಕಡಿಮೆಯಾಗಿದೆ. ಕಸ ವಿಲೇವಾರಿ ಬಿಬಿಎಂಪಿಯ ಹಿಡಿತಕ್ಕೆ ಬಂದಿದೆ. ಕಮರ್ಷಿಯಲ್ ತ್ಯಾಜ್ಯ ಉತ್ಪಾದನೆ ನಿಂತಿರುವ ಹಿನ್ನೆಲೆ ನಿತ್ಯ ನಗರದಲ್ಲಿ 900 ಟನ್ ಕಸ ಕಡಿಮೆಯಾಗಿದೆ. ಲಾಕ್‍ಡೌನ್‍ಗೂ ಮುನ್ನ ನಿತ್ಯ ಸರಾಸರಿ 4 ಸಾವಿರ ಟನ್ ಕಸ ಉತ್ಪತ್ತಿಯಾಗುತ್ತಿತ್ತು. ಇದೀಗ ಸರಾಸರಿ 3,100 ಟನ್ ಕಸ ಉತ್ಪತ್ತಿಯಾಗುತ್ತಿದೆ. ಪೌರಕಾರ್ಮಿಕರಿಗೂ ಒಂದು ಶಿಫ್ಟ್ ನಲ್ಲಷ್ಟೇ ಕೆಲಸ ಮಾಡಿಸುತ್ತಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News