ಬೆಂಗಳೂರು: ಎಚ್ಎಎಲ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ
Update: 2020-04-29 21:05 IST
ಬೆಂಗಳೂರು, ಎ.29: ನಗರದ ಎಚ್‍ಎಎಲ್ ಕಾರ್ಖಾನೆಯ ಫೋರ್ಜ್ ಫೌಂಡ್ರಿ ವಿಭಾಗದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಬುಧವಾರ ಜರುಗಿದೆ.
ಬೆಳಗ್ಗೆ 9:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಯಾವ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ.
ಮೆಗ್ನಿಷಿಯಂ ರಾಸಾಯನಿಕ ತ್ಯಾಜ್ಯವಿರಿಸಲಾದ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಫೋರ್ಜ್ ಫೌಂಡ್ರಿ ವಿಭಾಗದ 3ನೇ ಮಹಡಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. ಈ ವೇಳೆ ಸ್ಥಳಕ್ಕೆ ಆಗಮಿಸಿದ 8 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ.
ಅವಘಡ ಸಂಭವಿಸಿದಾಗ ವೇಳೆ ಯಾವ ಸಿಬ್ಬಂದಿಯೂ ಇರಲಿಲ್ಲ ಎಂದು ಎಚ್‍ಎಎಲ್ ಸಂಸ್ಥೆಯ ಮೂಲಗಳು ತಿಳಿಸಿದ್ದು, ಈ ಸಂಬಂಧ ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.