×
Ad

ಲಾಕ್‍ಡೌನ್‍ ಸಮಸ್ಯೆಗಳ ಕುರಿತು ಚರ್ಚೆ: ಗುರುವಾರ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಪ್ರತಿಪಕ್ಷಗಳ ಸಭೆ

Update: 2020-04-30 00:37 IST

ಬೆಂಗಳೂರು, ಎ.29: ಲಾಕ್‍ಡೌನ್‍ನಿಂದಾಗಿ ಕಾರ್ಮಿಕ ವರ್ಗ ಹಾಗೂ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧ ಪಕ್ಷಗಳ ನಾಯಕರು ಹಾಗೂ ರೈತ ಸಂಘಟನೆಗಳ ಪ್ರಮುಖರ ಸಭೆ ಕರೆದಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಬೆಳಗ್ಗೆ 11ಕ್ಕೆ ನಡೆಯಲಿರುವ ಸಭೆಗೆ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ ಹಾಗೂ ವಿವಿಧ ರೈತ ಸಂಘಟನೆಗಳ ಪ್ರಮುಖ ನಾಯಕರು ಭಾಗವಹಿಸಬೇಕೆಂದು ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಲಾಕ್‍ಡೌನ್ ಆಗಿ ಒಂದು ತಿಂಗಳಿಗಿಂತ ಹೆಚ್ಚು ದಿನಗಳಾಗುತ್ತಿದ್ದು, ರಾಜ್ಯದ ಎಲ್ಲ ವರ್ಗದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ನಿತ್ಯದ ದುಡಿಮೆಯನ್ನೇ ನಂಬಿ ಬದುಕುತ್ತಿದ್ದ ಸಾಂಪ್ರದಾಯಿಕ ವೃತ್ತಿಯನ್ನಾಧರಿಸಿದ ಶ್ರಮಿಕ ಸಮುದಾಯಗಳು ಹಾಗೂ ಆಟೋ, ಟ್ಯಾಕ್ಸಿ ಚಾಲಕರು, ಬೀದಿ ಬದಿಯ ವ್ಯಾಪಾರಿಗಳು ಕನಿಷ್ಟು ಸೌಲಭ್ಯಗಳು ಸಿಗದೆ ಕಂಗಾಲಾಗಿದ್ದಾರೆ.

ಸಾಲ ಮಾಡಿ ಬೆಳೆ ಬೆಳೆದ ರೈತರ ಸ್ಥಿತಿ ಲಾಕ್‍ಡೌನ್‍ನಿಂದಾಗಿ ಶೋಚನೀಯವಾಗಿದೆ. ಕೃಷಿ ಬೆಳೆಗಳನ್ನು ಖರೀದಿ ಮಾಡುವವರಿಲ್ಲದೆ, ಸಾಗಾಣೆ, ಮಾರುಕಟ್ಟೆ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಸುರಿಯುವಂತಾಗಿದೆ. ಇವೆಲ್ಲವುಗಳ ಬಗ್ಗೆ ಸರಕಾರದ ಮೇಲೆ ಒತ್ತಡ ತರಲು ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಲು ಸಭೆಯನ್ನು ಕರೆಯಲಾಗಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News