ಕಂಟೈನ್ಮೆಂಟ್ ಝೋನ್ ಅಲ್ಲದ ಕಡೆ ಕಬ್ಬಿಣ, ಸಿಮೆಂಟ್ ಅಂಗಡಿಗಳಿಗೆ ಅವಕಾಶ: ಸಚಿವ ಆರ್.ಅಶೋಕ್
ಬೆಂಗಳೂರು, ಎ. 30: ಕೊರೋನ ವೈರಸ್ ಸೋಂಕು ಪೀಡಿತರ ಹೆಚ್ಚಿನ ಸಂಖ್ಯೆಯಲ್ಲಿರುವ ಸೀಲ್‍ಡೌನ್ ಆಗಿರುವ 'ಕಂಟೈನ್ಮೆಂಟ್ ಝೋನ್'ಗಳನ್ನು ಹೊರತುಪಡಿಸಿ ಉಳಿದ ವಲಯಗಳಲ್ಲಿ ನಿರ್ಮಾಣ ಕಾಮಗಾರಿಗೆ ಅನುಕೂಲ ಆಗುವಂತೆ ಕಬ್ಬಿಣ ಮತ್ತು ಸಿಮೆಂಟ್ ಅಂಗಡಿಗಳ ವಹಿವಾಟಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಗುರುವಾರ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಾಕ್‍ಡೌನ್ ಪ್ರದೇಶಗಳಿಂದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕಬ್ಬಿಣ ಮತ್ತು ಸಿಮೆಂಟ್ ಅಂಗಡಿಗಳ ವಹಿವಾಟಿಗೆ ಅವಕಾಶ ನೀಡಲಾಗುತ್ತಿದೆ. ಇದರಿಂದ ನಿರ್ಮಾಣ ಹಂತದ ಕಟ್ಟಡಗಳಲ್ಲಿರುವ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಕಾಮಗಾರಿ ಕೈಗೊಳ್ಳಬಹುದಾಗಿದೆ ಎಂದರು.
ಕಬ್ಬಿಣ ಮತ್ತು ಸಿಮೆಂಟ್ ಅಂಗಡಿಗಳ ಜೊತೆಗೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿದಂತೆ ಸೀಲ್‍ಡೌನ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಡೆ ಜಲ್ಲಿ ಕ್ರಷರ್ ಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ. ಜಲ್ಲಿ ಮತ್ತು ಜಲ್ಲಿಪುಡಿ ಘಟಕಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ. ಇದರಿಂದ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರೆಯಲಿದೆ ಎಂದು ಹೇಳಿದರು.
ಕೊರೋನ ವೈರಸ್ ಸೋಂಕು ಪೀಡಿತ ಕಂಟೈನ್ಮೆಂಟ್ ಝೋನ್‍ಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಉಪನೋಂದಣಾಧಿಕಾರಿಗಳ ಕಚೇರಿ ಕಾರ್ಯಾರಂಭ ಮಾಡಲು ಅವಕಾಶ ಕಲ್ಪಿಸಿದ್ದು, ಪ್ರತಿ ಅರ್ಧ ಗಂಟೆಗೆ ಒಬ್ಬರಿಗೆ ನೋಂದಣಿಗೆ ಅವಕಾಶ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬಹುದು ಎಂದು ಹೇಳಿದರು.
ನೋಂದಣಿಗೆ ತೆರಳುವ ಸಾರ್ವಜನಿಕರು ಉಪನೋಂದಣಾಧಿಕಾರಿಗಳನ್ನು ದೂರವಾಣಿ ಮೂಲಕ ಮೊದಲೇ ಸಂಪರ್ಕಿಸಿ ಪಾಸ್ ಪಡೆದುಕೊಳ್ಳಬೇಕು. ಅಲ್ಲದೆ ಅಧಿಕಾರಿ ನೀಡುವ ಸಮಯವನ್ನು ಪಾಲಿಸಬೇಕು. ಆ ಪಾಸನ್ನು ತೋರಿಸಿ ನೋಂದಣಿ ಕಾರ್ಯಕ್ಕೆ ತೆರಳಲು ಅವಕಾಶ ನೀಡಲಾಗಿದೆ ಎಂದು ಅಶೋಕ್ ತಿಳಿಸಿದರು.
ಬರ ಪರಿಹಾರ ಕಾಮಗಾರಿ ಮುಂದುವರಿಕೆ: ಮಳೆ ಬೀಳದಿರುವ ರಾಜ್ಯದ 18 ಜಿಲ್ಲೆಗಳ 49 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದು, ಆ ಜಿಲ್ಲೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಇನ್ನೂ ಒಂದು ತಿಂಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.
ಬರ ಪೀಡಿತ ತಾಲೂಕುಗಳಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ, ಕೊಳವೆಬಾವಿ ಕೊರೆಸುವುದು ಸೇರಿದಂತೆ ಖಾಸಗಿ ಬೋರ್‍ವೆಲ್‍ಗಳ ಬಳಕೆ ಮಾಡಿಕೊಳ್ಳಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.