×
Ad

ರಾಮನಗರ ಜಿಲ್ಲೆಗೂ 'ಕೊರೋನ ಮುಕ್ತ' ವಿನಾಯಿತಿ ನೀಡಿ: ಕುಮಾರಸ್ವಾಮಿ ಆಗ್ರಹ

Update: 2020-04-30 17:13 IST

ಬೆಂಗಳೂರು, ಎ. 30: ಕೊರೋನ ವೈರಸ್ ಸೋಂಕು ಮುಕ್ತವಾಗಿರುವ ಜಿಲ್ಲೆಗಳಲ್ಲಿ ನೀಡಿರುವ ವಿನಾಯಿತಿಯನ್ನು ತಕ್ಷಣವೇ ರಾಮನಗರ ಜಿಲ್ಲೆಗೂ ಅನ್ವಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರನ್ನು ಆಗ್ರಹಿಸಿದ್ದಾರೆ.

ಗುರುವಾರ ರಾಮನಗರ ಜಿಲ್ಲೆಗೆ ವಿನಾಯಿತಿ ನೀಡುವ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಹೊರಗಿನಿಂದ ಬರುವ ಕಾರ್ಮಿಕರಿಗೆ ತಾತ್ಕಾಲಿಕ ನಿರ್ಬಂಧ ಮುಂದುವರಿಸಿದರೂ, ರಾಜ್ಯದ 9 ಜಿಲ್ಲೆಗಳಿಗೆ ನೀಡಿರುವಂತೆ ರಾಮನಗರ ಜಿಲ್ಲೆಯ ಕಾರ್ಮಿಕರು ದುಡಿದು ತಿನ್ನಲು ತಕ್ಷಣವೇ ವಿನಾಯಿತಿ ಘೋಷಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಮನಗರ ಜಿಲ್ಲೆಯಾದ್ಯಂತ ಕಾರ್ಖಾನೆಗಳ ಪುನರಾರಂಭಕ್ಕೆ ರಾಜ್ಯ ಸರಕಾರ ತಕ್ಷಣವೇ ಹಸಿರು ನಿಶಾನೆ ತೋರಬೇಕು. ಹಾರೋಹಳ್ಳಿ, ಬಿಡದಿ ಕೈಗಾರಿಕಾ ಪ್ರದೇಶಗಳು ಸೇರಿದಂತೆ ಜಿಲ್ಲೆಯಲ್ಲಿ ಕೈಗಾರಿಕೆಗಳಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳೊಂದಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಮೂಲಕ ಉದ್ದಿಮೆದಾರರು ಮತ್ತು ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News