ಸರಕಾರದ ಕೊರೋನ ಅವ್ಯವಹಾರ ನೋಡಿಕೊಂಡು ಸುಮ್ಮನೆ ಕೂರಲ್ಲ: ಡಿಕೆಶಿ ಕಿಡಿ

Update: 2020-04-30 16:15 GMT

ಬೆಂಗಳೂರು, ಎ.30: ಕಳೆದ ಒಂದು ತಿಂಗಳಿಂದ ಸಂಕಷ್ಟದ ಸಮಯದಲ್ಲಿ ನಾವು ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಿದ್ದೇವೆ. ರಾಜಕಾರಣ ಮಾಡಬಾರದು ಹಾಗೂ ಮಾನವೀಯತೆ ದೃಷ್ಟಿಯಿಂದ ನಾವು ಸರಕಾರದ ಜೊತೆ ಕೈ ಜೋಡಿಸಿದ್ದೇವೆ. ಕಳೆದ 40 ದಿನಗಳಲ್ಲಿ ಸರಕಾರ ಏನು ಮಾಡಿದೆ ಎಂಬುದನ್ನು ನೀವೆಲ್ಲ ನೋಡಿದ್ದೀರಿ. ಸಚಿವರ ನಡುವೆ ಸಮನ್ವಯತೆ, ಅಧಿಕಾರಿಗಳಲ್ಲಿ ಹೊಂದಾಣಿಕೆ ಕೊರತೆ ಎದ್ದು ಕಾಣುತ್ತಿದೆ. ಪ್ರತಿ ವಿಚಾರದಲ್ಲೂ ದಂಧೆ ನಡೆಯುತ್ತಿದೆ. ಇದನ್ನು ನೋಡಿಕೊಂಡು ಕೂರಲು ಇನ್ನು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

ಗುರುವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರ ಜನರಿಗೆ ಕೊಟ್ಟಿರುವ ಆಶ್ವಾಸನೆಗಳಲ್ಲಿ ಒಂದೂ ಕಾರ್ಯ ರೂಪಕ್ಕೆ ಬಂದಿಲ್ಲ. ಆಹಾರ ವಿತರಣೆಯಲ್ಲಿ ಶೇ.20ರಷ್ಟು ಕೆಲಸ ಆಗಿರುವುದು ಬಿಟ್ಟರೆ, ಆರೋಗ್ಯದ ವಿಷಯದಿಂದ ಹಿಡಿದು ಕಾರ್ಮಿಕರ ಸಮಸ್ಯೆವರೆಗೂ ಎಲ್ಲೂ ಕೆಲಸ ಆಗಿಲ್ಲ ಎಂದು ದೂರಿದರು.

ಆದಾಯ ಇಲಾಖೆ ಅಧಿಕಾರಿಗಳ ಜೊತೆ ಮಾತನಾಡಿದಾಗ ಪಿಂಚಣಿ ಹಣ ಕೂಡ ಸರಿಯಾಗಿ ಫಲಾನುಭವಿಗಳಿಗೆ ತಲುಪಿಲ್ಲ ಎಂಬುದು ಗೊತ್ತಾಗಿದೆ. ಇದನ್ನು ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. ಕೊರೋನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇರಲಿ, ಜೆಡಿಎಸ್ ಇರಲಿ ಇತರೆ ಸಂಘಟನೆಗಳಿರಲಿ ಎಲ್ಲವೂ ಸ್ವಹಿತಾಸಕ್ತಿ ಮರೆತು ರಸ್ತೆಗಿಳಿದು ಜನರಿಗೆ ಸಹಾಯ ಮಾಡಿವೆ. ಶಕ್ತಿ ಮೀರಿ ಜನಪರವಾಗಿ ಶ್ರಮಿಸಿವೆ ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ನಾವು ರಾಜಕಾರಣವನ್ನು ದೂರವಿಟ್ಟೆವು. ಆದರೆ, ಈಗ ಸಮಯ ಮೀರುತ್ತಿದೆ. ಇನ್ನು ನಾವು ಸುಮ್ಮನೆ ಕೂತರೆ ಜನರಿಗೆ, ನಮ್ಮ ಜವಾಬ್ದಾರಿಗೆ ಮೋಸ ಮಾಡಿದಂತಾಗುತ್ತದೆ. ಹಾಲು ಕೊಡಿ ಅಂದರೆ ಅದರಲ್ಲೂ ವ್ಯಾಪಾರ, ಅಕ್ಕಿ ಕೊಡುವುದರಲ್ಲೂ ಅವ್ಯವಹಾರ. ಈವರೆಗೂ ಸರಕಾರ ಒಂದೇ ಒಂದು ಕಡೆ ತರಕಾರಿಗಳನ್ನು ಖರೀದಿ ಮಾಡಿರುವ ದಾಖಲೆ ನಿಮ್ಮ ಬಳಿ ಇದ್ದರೆ ಕೊಡಿ. ಅವರು ಖರೀದಿಸಿಲ್ಲ ಅಂದರೆ ಹೊರ ರಾಜ್ಯಗಳಿಗೆ ಕಳುಹಿಸಿದ್ದಾರಾ? ಅದಕ್ಕೆ ಅವಕಾಶ ಸಿಕ್ಕಿದ್ಯಾ? ಇದ್ಯಾವುದರ ಬಗ್ಗೆಯೂ ಮಾಹಿತಿ ಸಿಕ್ಕಿಲ್ಲ ಎಂದು ಶಿವಕುಮಾರ್ ತಿಳಿಸಿದರು.

ವಾಹನ ಸಾಲ ಪಡೆದಿರುವವರಿಗೆ ಕಂತಿನ ವಿನಾಯಿತಿ, ಬಡ್ಡಿ ಮನ್ನಾ ಅಥವಾ ವಿಮೆ ಕಂತು ತಡವಾಗಿ ಕಟ್ಟಲು ಅವಕಾಶ ಕಲ್ಪಿಸಲಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಲ್ಲ ವಿಚಾರದಲ್ಲೂ ವಿಫಲವಾಗಿರುವುದು ಎದ್ದು ಕಾಣುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರಕಾರಗಳು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದನ್ನು ನಾನು ಈವರೆಗೂ ನೋಡಿರಲಿಲ್ಲ ಎಂದು ಅವರು ಟೀಕಿಸಿದರು.

ತೋಟಗಳಲ್ಲಿ ಫಲಗಳು ಕೊಳೆಯುತ್ತಿವೆ. ಮುಸಲ್ಮಾನ ವ್ಯಾಪಾರಿಗಳಿಗೆ ತೋಟದೊಳಗೆ ಕಾಲಿಡಲು ಅವಕಾಶ ನೀಡುತ್ತಿಲ್ಲ. ಬೇರೆ ರಾಜ್ಯದವರು ಬರುವಂತಿಲ್ಲ. ಕೋಳಿಗಳನ್ನು ಜೀವಂತವಾಗಿ ಮಣ್ಣಲ್ಲಿ ಮುಚ್ಚಿದ್ದಾರೆ. ಇದೆಲ್ಲವನ್ನೂ ನೋಡಿದರೆ ಇಂದು ಎಲ್ಲ ವರ್ಗದ ಜನರ ಬದುಕು ಶೋಚನೀಯವಾಗಿದೆ. ಈ ವರ್ಗದ ಜನರನ್ನು ಬದುಕಿಯೂ ಸಾಯುವಂತೆ ಮಾಡಲಾಗಿದೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News