ಕೊರೋನ ಕರ್ತವ್ಯದಲ್ಲಿರುವ ವೈದ್ಯೆಗೆ ಪತಿ ಕಿರುಕುಳ: ಆರೋಪ
ಬೆಂಗಳೂರು, ಎ.30: ಕೊರೋನ ಸೋಂಕು ಸಂಬಂಧ ನಿರಂತರ ಕರ್ತವ್ಯದಲ್ಲಿರುವ ವೈದ್ಯೆಯೊಬ್ಬರಿಗೆ ಪತಿ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಇಲ್ಲಿನ ಜಯನಗರ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪತ್ನಿ ಗರ್ಭಿಣಿಯಾಗಿದ್ದರೂ ಪತಿ ಬುಧವಾರ ರಾತ್ರಿ ಮನೆಯಿಂದ ಹೊರ ಹಾಕಿದ್ದಾನೆ ಎನ್ನಲಾಗಿದ್ದು, ಈ ಸಂಬಂಧ ವನಿತಾ ಸಹಾಯವಾಣಿ ಕೇಂದ್ರದಲ್ಲಿ ದೂರು ದಾಖಲಾಗಿದೆ.
ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪತಿ ಲಾಕ್‍ಡೌನ್ ಹಿನ್ನೆಲೆ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಆದರೆ, ಪತ್ನಿ ವೈದ್ಯೆ ಗರ್ಭಿಣಿಯಾಗಿದ್ದರೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮನೆಯಲ್ಲಿ ಅಡುಗೆ ಮಾಡಲ್ಲ, ಮನೆ ಸ್ವಚ್ಛ ಮಾಡಲ್ಲ, ಸದಾ ಆಸ್ಪತ್ರೆಯಲ್ಲೇ ಇರುತ್ತೀಯಾ ಎಂದು ವೈದ್ಯೆ ಪತ್ನಿಗೆ ಪತಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಇದೇ ರೀತಿ ಕೆಲವು ದಿನಗಳಿಂದ ಟೆಕ್ಕಿ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದು, ಕೊನೆಗೆ ಇದನ್ನು ಸಹಿಸಿಕೊಳ್ಳಲಾಗದೆ ಪತ್ನಿ ವೈದ್ಯೆ ವನಿತಾ ಸಹಾಯವಾಣಿಗೆ ಫೋನ್ ಮಾಡಿ ದೂರು ನೀಡಿದ್ದಾರೆ. ವನಿತಾ ಸಹಾಯವಾಣಿ ಮತ್ತು ಪೊಲೀಸರು ಗರ್ಭಿಣಿ ವೈದ್ಯೆಯ ಸಹಾಯಕ್ಕೆ ಬಂದಿದ್ದು, ನಂತರ ಟೆಕ್ಕಿ ಪತಿಯ ವಿರುದ್ಧ ಎನ್‍ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.