×
Ad

ಕೃಷಿ ಮಾರಾಟ ಮಂಡಳಿಗೆ ವಂಚನೆ ಆರೋಪ: ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ ಸಿಸಿಬಿ ಪೊಲೀಸರು

Update: 2020-04-30 23:55 IST

ಬೆಂಗಳೂರು, ಎ.30: ಕೃಷಿ ಮಾರಾಟ ಮಂಡಳಿಗೆ 48 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ 1,400 ಪುಟಗಳ ಚಾರ್ಜ್‍ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ ಬ್ಯಾಂಕ್ ಉದ್ಯೋಗಿಗಳನ್ನು ಆರೋಪಿಗಳನ್ನಾಗಿ ಉಲ್ಲೇಖಿಸಲಾಗಿದೆ.

ಮಂಡಳಿಯ 48 ಕೋಟಿ ನಿಶ್ಚಿತ ಠೇವಣಿ (ಎಫ್‍ಡಿ) ಹಣವನ್ನು ಬೇರೆ ಖಾತೆಗಳಿಗೆ ವರ್ಗಾಯಿಸಿ ವಂಚಿಸಿದ ಪ್ರಕರಣದಲ್ಲಿ ಮಂಡಳಿಯ ಮಾರುಕಟ್ಟೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಸಿದ್ದಗಂಗಯ್ಯ, ಸಿಂಡಿಕೇಟ್ ಬ್ಯಾಂಕಿನ ಉತ್ತರಹಳ್ಳಿ ಶಾಖೆ ವ್ಯವಸ್ಥಾಪಕ ಮಂಜುನಾಥ್ ಸೇರಿ 12 ಮಂದಿ ವಿರುದ್ಧ ಸಿಸಿಬಿ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಈ ಕುರಿತು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಪ್ರಕರಣದಲ್ಲಿ ಉತ್ತರಹಳ್ಳಿ ಶಾಖೆಯ ಸಹಾಯಕ ವ್ಯವಸ್ಥಾಪಕ, ನಿವೃತ್ತ ಖಜಾನೆ ಅಧಿಕಾರಿ ಲಕ್ಷ್ಮಯ್ಯ ಅವರನ್ನೂ ಆರೋಪಿಗಳಾಗಿ ಹೆಸರಿಸಲಾಗಿದೆ. ಎಲ್ಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಲಾಗಿದ್ದು, 1400 ಪುಟಗಳ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿ ಪುನೀತ್ ಸಲ್ಲಿಸಿದ್ದಾರೆ ಎಂದರು.

ಮಂಡಳಿಯ ಆವರ್ತ ನಿಧಿಯಿಂದ ನಿಶ್ಚಿತ ಠೇವಣಿ (ಎಫ್‍ಡಿ) ಸಲುವಾಗಿ ಬ್ಯಾಂಕ್‍ಗಳಿಂದ ಕೊಟೇಷನ್ ಕೇಳಲಾಗಿತ್ತು. ಈ ವೇಳೆ ಸಿಂಡಿಕೇಟ್ ಬ್ಯಾಂಕ್ ಉತ್ತರಹಳ್ಳಿ ಶಾಖೆಯು ಎಫ್.ಡಿ ಹೂಡಿಕೆಗೆ ಹೆಚ್ಚು ಬಡ್ಡಿ ನೀಡುವುದಾಗಿ ತಿಳಿಸಿತ್ತು. ರಾಜ್ಯ ಕೃಷಿ ಮಾರಾಟ ಮಂಡಳಿ ಆವರ್ತ ನಿಧಿಯುಳ್ಳ ರಾಜಾಜಿನಗರ ಶಾಖೆಯೂ ಆಂಧ್ರ ಬ್ಯಾಂಕಿನಿಂದ ಆರ್‍ಟಿಜಿಎಸ್ ಮೂಲಕ 100 ಕೋಟಿ ಹಣವನ್ನು ಸಿಂಡಿಕೇಟ್ ಬ್ಯಾಂಕಿನ ಉತ್ತರಹಳ್ಳಿ ಶಾಖೆಗೆ ವರ್ಗಾವಣೆ ಮಾಡಿ ತಲಾ  50 ಕೋಟಿಯಂತೆ ಎರಡು ನಿಶ್ಚಿತ ಠೇವಣಿ ಇಡಲಾಗಿತ್ತು.

ಜ.20ರಂದು ಬ್ಯಾಂಕಿಗೆ ಭೇಟಿ ನೀಡಿ ವಿಚಾರಿಸಿದಾಗ 52 ಕೋಟಿ ಎಫ್‍ಡಿ ಹೂಡಿಕೆಗೆ ದಾಖಲಾತಿ ಕೊಟ್ಟಿದ್ದಾರೆ. ಆದರೆ, ಬ್ಯಾಂಕ್ ಸಿಬ್ಬಂದಿ ಈ ಹಿಂದೆ ನೀಡಿದ್ದ ಎಫ್‍ಡಿ ಹೂಡಿಕೆಗಳ ಎರಡು ಪ್ರತ್ಯೇಕ ಸಂಖ್ಯೆಗಳನ್ನು ಪರಿಶೀಲಿಸಿದಾಗ ಅವು ನಕಲಿ ಎಂಬುದು ಗೊತ್ತಾಗಿದೆ. ಅಲ್ಲದೆ,  48 ಕೋಟಿ ಹಣಕ್ಕೆ ಲೆಕ್ಕ ಕೊಡುತ್ತಿಲ್ಲ. ಬೇರೆ ಖಾತೆಗಳಿಗೆ ಹಣ ವರ್ಗಾಯಿಸಿ ವಂಚಿಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕೃಷಿ ಮಾರಾಟ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಕರೀಗೌಡ ಅವರು ನೀಡಿದ ದೂರಿನ ಆಧಾರದಲ್ಲಿ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಗೃಹ ಸಚಿವರ ಸೂಚನೆಯಂತೆ ಈ ಪ್ರಕರಣವನ್ನು ಸಿಸಿಬಿ ತನಿಖೆಗೆ ವಹಿಸಲಾಗಿತ್ತು ಎಂದು ಸಂದೀಪ್ ಪಾಟೀಲ್ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News