ಕೇಂದ್ರ ಸರಕಾರದ ಅನ್ನಯೋಜನೆಯಡಿ ಮೇ1 ರಿಂದ ಪಡಿತರ ವಿತರಣೆ: ಸಚಿವ ಗೋಪಾಲಯ್ಯ

Update: 2020-04-30 18:34 GMT

ಬೆಂಗಳೂರು, ಎ.30: ಕೇಂದ್ರ ಸರಕಾರದ ಅನ್ನ ಯೋಜನೆಯಡಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರ ವಿತರಣೆ ನಾಳೆ(ಮೇ 1)ಯಿಂದ ಆರಂಭವಾಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್‍ನಲ್ಲಿರುವ ಪ್ರತಿ ಸದಸ್ಯರಿಗೆ 2 ತಿಂಗಳ 10 ಕೆಜಿ ಉಚಿತ ಅಕ್ಕಿ, ಪ್ರತಿ ಕುಟುಂಬಕ್ಕೆ ಒಂದು ಕೆಜಿ ತೊಗರಿಬೇಳೆ ವಿತರಿಸಲಾಗುತ್ತದೆ. 19 ಜಿಲ್ಲೆಗಳಲ್ಲಿ ನಾಳೆಯಿಂದ ಪಡಿತರ ವಿತರಣಾ ಕಾರ್ಯ ನಡೆಯಲಿದೆ. ಉಳಿದ 12 ಜಿಲ್ಲೆಗಳಿಗೆ ಮೇ 3ರಿಂದ ಪಡಿತರ ವಿತರಿಸಲಾಗುತ್ತದೆ. ಇನ್ನು ಜೂನ್ ತಿಂಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಪಡಿತರವನ್ನು ಒಟ್ಟಿಗೆ ನೀಡಲಾಗುವುದು ಎಂದು ತಿಳಿಸಿದರು.

ಇನ್ನು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ 1,88,512 ಕುಟುಂಬ ವರ್ಗಕ್ಕೂ ಮೂರು ತಿಂಗಳು ಉಚಿತ 10 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಎಪಿಎಲ್ ಕಾರ್ಡ್‍ಗೆ ಅರ್ಜಿ ಹಾಕಿದ 61,233 ಫಲಾನುಭವಿಗಳಿಗೂ ಪ್ರತಿ ಕೆಜಿಗೆ 15 ರೂ.ನಂತೆ 10 ಕೆಜಿ ಅಕ್ಕಿ ವಿತರಿಸಲಾಗುತ್ತದೆ. ಪಡಿತರ ಪಡೆಯಲು ಬೆರಳಚ್ಚು ಬಯೋಮೆಟ್ರಿಕ್ ಅಥವಾ ಒಟಿಪಿ ದೃಢೀಕರಣ ಕಡ್ಡಾಯವೆಂದು ಅವರು ಹೇಳಿದರು.

ತೂಕದಲ್ಲಿ ಮೋಸ, ಇಲಾಖೆಯ ಪಡಿತರ ಬಿಟ್ಟು ಬೇರೆ ವಸ್ತುಗಳ ಪಡೆಯುವಂತೆ ಒತ್ತಾಯಿಸುವುದು, ಒಟಿಪಿ ಹೆಸರಲ್ಲಿ ಸೇವಾ ಶುಲ್ಕ ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂಥವರು ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಗೋಪಾಲಯ್ಯ ಎಚ್ಚರಿಕೆ ನೀಡಿದರು.

ಯಾವುದೇ ಜಿಲ್ಲೆಯ ಹಾಗೂ ದೇಶದ ಯಾವುದೇ ರಾಜ್ಯಗಳ ಪಡಿತರ ಚೀಟಿದಾರರು ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆಯಬಹುದಾಗಿದೆ. ಈ ಬಗ್ಗೆ ಅಧಿಕಾರಿಗಳು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳ ಮಾಲಕರಿಗೆ ಮನವರಿಕೆ ಮಾಡಿಕೊಡಬೇಕು. ಪಡಿತರ ವಿತರಣೆ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

-ಗೋಪಾಲಯ್ಯ, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News