×
Ad

ಮೇ 3ರ ಬಳಿಕ ಲಾಕ್‍ಡೌನ್ ಸಡಿಲ ಮಾಡುವಾಗ ಎಚ್ಚರವಿರಲಿ: ಸಿದ್ದರಾಮಯ್ಯ ಸಲಹೆ

Update: 2020-05-01 17:27 IST

ಬೆಂಗಳೂರು : ಲಾಕ್‍ಡೌನ್ ಸಡಿಲಿಕೆ ಮಾಡುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸರಕಾರಕ್ಕೆ ಸಲಹೆ ಮಾಡಿದ್ದಾರೆ.

ಶುಕ್ರವಾರ ಕೆ.ಆರ್.ಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ಚಟುವಟಿಕೆಗಳು ರಾಜ್ಯದಲ್ಲಿ ಗರಿಗೆದರಬೇಕಾದರೆ ಲಾಕ್‍ಡೌನ್ ಸಡಿಲಿಕೆ ಅನಿವಾರ್ಯ. ಆದರೆ ಈ ವಿಷಯದಲ್ಲಿ ಸರ್ಕಾರ ವಿವೇಚನೆಯಿಂದ ತೀರ್ಮಾನ ಕೈಗೊಳ್ಳಬೇಕು ಎಂದರು.

ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಪುನಾರಂಭವಾಗಬೇಕಾಗುತ್ತದೆ. ಇಲ್ಲದಿದ್ದರೆ ಸರ್ಕಾರಿ ನೌಕರರಿಗೆ ವೇತನ ನೀಡಲೂ ಆಗದಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಲಾಕ್‍ಡೌನ್ ಸಡಿಲಿಕೆ ಅನಿವಾರ್ಯ. ಆದರೆ ಕಂಟೈನ್‍ಮೆಂಟ್ ವಲಯದಲ್ಲಿ ಲಾಕ್‍ಡೌನ್ ಸಡಿಲಿಕೆ ಮಾಡಬಾರದು. ಕಿತ್ತಳೆ ಮತ್ತು ಹಸಿರು ವಲಯದಲ್ಲಿ ಸಡಿಲಿಕೆ ಮಾಡಿ ವಹಿವಾಟಿಗೆ ಅವಕಾಶ ಕೊಡಬೇಕು. ಬಡವರು ಈಗ ಯಾವುದನ್ನೂ ಖರೀದಿ ಮಾಡುವ ಶಕ್ತಿ ಉಳಿಸಿಕೊಂಡಿಲ್ಲ. ಖರೀದಿ ಮಾಡುವ ಶಕ್ತಿ ಅವರಿಗೆ ಬರಬೇಕಾದರೆ ಸರ್ಕಾರ ಅವರಿಗಾಗಿ ಒಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಸಾಂಪ್ರದಾಯಿಕ ವೃತ್ತಿ ಮಾಡುವವರಿಗೆ ಈ ಪ್ಯಾಕೇಜ್ ಕೊಡಬೇಕು. ಆಗ ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆ ಉತ್ತಮವಾಗಿ ನಡೆಯಲು ಸಾಧ್ಯವಾಗುತ್ತದೆ. ಸರ್ಕಾರಕ್ಕೆ ತೆರಿಗೆ ಸಂದಾಯವಾಗುತ್ತದೆ. ಲಾಕ್‍ಡೌನ್ ಇನ್ನಷ್ಟು ಬಿಗಿಯಾದರೆ ನಿರುದ್ಯೋಗ ಸಮಸ್ಯೆ ಇನ್ನಷ್ಟು ಹೆಚ್ಚುವ ಅಪಾಯವೂ ಇದೆ. ಜೊತೆಗೆ ಜನ ಹಸಿವಿನಿಂದ ಬಳಲುವ ಸನ್ನಿವೇಶ ಸಹ ನಿರ್ಮಾಣವಾಗುತ್ತದೆ ಎಂದು ಹೇಳಿದರು.

ಚುನಾಯಿತ ಪ್ರತಿನಿಧಿಗಳು, ಸಂಘ, ಸಂಸ್ಥೆಗಳು ಹಸಿದವರಿಗೆ ಅನ್ನ ನೀಡುವ ಕೆಲಸ ಮಾಡದೇ ಹೋಗಿದ್ದರೆ ರಾಜ್ಯದಲ್ಲಿ ಹಾಹಾಕಾರ ಉಂಟಾಗುತ್ತಿತ್ತು. ಜನ ಬೀದಿಗಿಳಿದು ಹೋರಾಟ ಮಾಡುವಂತೆ ಆಗುತ್ತಿತ್ತು. ಹೀಗಾಗಿ ಸರ್ಕಾರ ಸೆ. 3ರ ಬಳಿಕ ವಿವೇಚನೆಯಿಂದ ಲಾಕ್‍ಡೌನ್ ಸಡಿಲಿಕೆ ಮಾಡಬೇಕು. ರಾಜ್ಯ ಸರ್ಕಾರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದರೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕುತ್ತಿಲ್ಲ. ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ. ನಿಗಮ-ಮಂಡಳಿಗಳಲ್ಲಿ ಆಗುತ್ತಿರುವ ವೆಚ್ಚಕ್ಕೆ ಮೊದಲು ಕಡಿವಾಣ ಹಾಕಬೇಕು. ಅಲ್ಲಿಯ ಅಧಿಕಾರಿ ಗಳಿಗೆ ನೀಡುತ್ತಿರುವ ಸವಲತ್ತು ನಿಲ್ಲಿಸಬೇಕು. ತೀರಾ ಅಗತ್ಯ ಎನಿಸುವ ವಿಚಾರಗಳಿಗೆ ಮಾತ್ರ ಸರ್ಕಾರ ವೆಚ್ಚ ಮಾಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆಯನ್ನೇ ಮಾಡುವುದಿಲ್ಲ. ಅಧಿಕಾರಿಗಳು ಬರೆದುಕೊಟ್ಟಿದ್ದನ್ನು ಮಾತ್ರ ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News