ಅಕ್ಕಿ ವಿತರಣೆಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ: ಸಚಿವ ಬಿ.ಎ.ಬಸವರಾಜ

Update: 2020-05-01 12:03 GMT

ಬೆಂಗಳೂರು, ಮೇ 1: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರಿಗೆ ವಿತರಿಸುತ್ತಿರುವ ಅಕ್ಕಿ ವಿತರಣೆಯಲ್ಲಿ ಯಾವುದೇ ರೀತಿಯ ಅವ್ಯವಹಾರವಾಗಿಲ್ಲ. ಬಡವರ ಅನ್ನದಲ್ಲಿ ಅವ್ಯವಹಾರ ಮಾಡುವಂತಹ ದುಸ್ಥಿತಿ ನಮ್ಮ ಸರಕಾರದಲ್ಲಿರುವ ಯಾವುದೆ ಸದಸ್ಯರಿಗೆ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ತಿಳಿಸಿದರು.

ಕೆ.ಆರ್.ಪುರದ ಅಮರಜ್ಯೋತಿ ಶಾಲೆಯಲ್ಲಿ ಬಡವರಿಗೆ ದಿನಸಿ ಪದಾರ್ಥಗಳ ಕಿಟ್‍ಗಳನ್ನು ವಿತರಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ಕಿ ವಿತರಣೆಯಲ್ಲಿ ಅವ್ಯವಹಾರವಾಗಿದೆ ಎಂದು ವಿಪಕ್ಷಗಳು ಮಾಡುತ್ತಿರುವ ಆರೋಪ ನಿರಾಧಾರವಾದದ್ದು ಎಂದರು.

ಇದು ರಾಜಕೀಯ ಮಾಡುವ ಸಮಯವಲ್ಲ. ಬಡವರು, ಕೂಲಿ ಕಾರ್ಮಿಕರು ಸೇರಿದಂತೆ ಎಲ್ಲರೂ ಸಂಕಷ್ಟದಲ್ಲಿರುವಾಗ ಈ ರೀತಿಯ ಆರೋಪಗಳನ್ನು ಮಾಡುವುದು ಎಷ್ಟರ ಮಟ್ಟಿಗೆ ಸರಿ. ನಾನು ಪ್ರತಿನಿಧಿಸುವ ಈ ಕೆ.ಆರ್.ಪುರ ಕ್ಷೇತ್ರ ಹಾಗೂ ನಾನು ಉಸ್ತುವಾರಿಯಾಗಿರುವ ದಾವಣಗೆರೆ ಜಿಲ್ಲೆಯವರು ಯಾವುದೇ ಸಂಕಷ್ಟದ ಸಂದರ್ಭದಲ್ಲಿ ಬೇಕಾದರೂ ನನ್ನನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ ಮಾತನಾಡಿ, ಪಡಿತರ ಚೀಟಿ ಇದ್ದವರಿಗೆ ಹಾಗೂ ಇಲ್ಲದವರಿಗೆ ಅಗತ್ಯ ಇರುವವರಿಗೆ ಹಾಲು ಮತ್ತು ಆಹಾರ ಪದಾರ್ಥಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸ್ಥಳೀಯ ಶಾಸಕ ಹಾಗೂ ಸಚಿವರಾದ ಬಸವರಾಜ ನೀಡುವ ಆದೇಶಗಳನ್ನು ಪಾಲಿಸಲು ನಾವೆಲ್ಲರೂ ಬದ್ಧರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಅಮರಜ್ಯೋತಿ ಶಾಲೆಯ ಮುಖ್ಯಸ್ಥ ಶ್ರೀನಿವಾಸ್ ರಾಜು, ಮುಖಂಡರಾದ ಡಿ.ಎ.ಶ್ರೀನಿವಾಸ್, ಮುರಳೀಧರ, ಹರಿನಾಥ ರೆಡ್ಡಿ, ಕೆ.ಟಿ.ಯಲ್ಲಪ್ಪ, ವೆಂಕಟೇಶ್ ಬಾಬು, ಗಂಗಮ್ಮತಿಮ್ಮಯ್ಯ, ಬಿಟಿಎಸ್ ಪ್ರಕಾಶ್, ಶಿವಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News