×
Ad

​ಮಾಸ್ಕ್ ಧರಿಸದೆ ಹೊರಗೆ ಬಂದರೆ ದೊಡ್ಡ ಮೊತ್ತದ ದಂಡ !

Update: 2020-05-01 17:35 IST

ಬೆಂಗಳೂರು, ಮೇ. 1: ಕೊರೋನ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೊರಗೆ ಸಂಚರಿಸುವ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲವಾದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಬೃಹತ್ ಮೊತ್ತದ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಮಾಸ್ಕ್ ಧರಿಸದೆ ಹೊರಗೆ ತಿರುಗಾಡುವವರಿಗೆ ಮೊದಲ ಬಾರಿಗೆ 1 ಸಾವಿರ ರೂ. ದಂಡ, ಇದು ಪುನರಾವರ್ತನೆಯಾದರೆ 2 ಸಾವಿರ ರೂ.ದಂಡ ವಿಧಿಸಲಾಗುವುದು. ಕೆಲಸ ಮಾಡುವ ಸ್ಥಳಗಳಲ್ಲಿ ಐದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ಬಳಸಿದ ಮಾಸ್ಕ್ ಮತ್ತು ಗ್ಲೌಸ್‌ಗಳನ್ನು ಮನಸೋ ಇಚ್ಛೆ ಬಿಸಾಡುವಂತಿಲ್ಲ. ಅವುಗಳನ್ನು ಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಬಳಸಿದ ಸ್ಯಾನಿಟೈಸರ್ ಖಾಲಿ ಬಾಟಲಿ, ಮಾಸ್ಕ್ ಹಾಗೂ ಗ್ಲೌಸ್‌ಗಳನ್ನು ಚೀಲದಲ್ಲಿ ಹಾಕಿ ಪ್ರತ್ಯೇಕವಾಗಿ ಕಸದ ಗಾಡಿಗಳಿಗೆ ನೀಡಬೇಕು. ಇಲ್ಲವಾದರೆ ಅದಕ್ಕೂ 1 ಸಾವಿರ ರೂ. ದಂಡ ವಿಧಿಸಲಾಗುವುದು. ಎಲ್ಲೆಂದರಲ್ಲಿ, ಕಂಡ-ಕಂಡಲ್ಲಿ ಉಗುಳಿದರೆ, ಮೂತ್ರ ವಿಸರ್ಜನೆ ಮಾಡುವುದು, ಗುಟ್ಕಾ ಸಹಿತ ತಂಬಾಕು ಉತ್ಪನ್ನಗಳು ಸೇರಿದಂತೆ ಜಗಿದು ಉಗಿಯುವವರಿಗೂ ದಂಡ ಹಾಕಲಾಗುವುದು ಎಂದು ಆದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News