ಇನ್ನು ಮನವಿ ಮಾಡುವುದಿಲ್ಲ, ರಸ್ತೆಗಿಳಿದು ಹೋರಾಟ ಮಾಡುತ್ತೇವೆ: ಸರಕಾರಕ್ಕೆ ಡಿಕೆಶಿ ಎಚ್ಚರಿಕೆ

Update: 2020-05-02 16:31 GMT

ಬೆಂಗಳೂರು, ಮೇ 2: ರಾಜ್ಯ ಸರಕಾರದ ವತಿಯಿಂದ ವಿತರಣೆ ಮಾಡಲಾಗುತ್ತಿದ್ದ ದಿನಸಿ ಸಾಮಗ್ರಿಗಳ ಮೇಲೆ ಬಿಜೆಪಿ ಪಕ್ಷದ ಚೀಟಿಗಳನ್ನು ಅಂಟಿಸಿ, ಪ್ರಚಾರ ಮಾಡಲು ಮುಂದಾಗಿದ್ದಾರೆ. ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಶನಿವಾರ ಇಲ್ಲಿನ ಸದಾಶಿವನಗರದ ತಮ್ಮ ನಿವಾಸದಲ್ಲಿ ರಾಜ್ಯದಲ್ಲಿ ಮಕ್ಕಳು, ಬಾಣಂತಿಯರಿಗೆ ನೀಡಬೇಕಾಗಿರುವ ಆಹಾರವನ್ನು ಕೊರೋನ ಸೋಂಕು ನೆಪದಲ್ಲಿ ಬಿಜೆಪಿ ಪಕ್ಷದ ನಾಯಕರು ದುರ್ಬಳಕೆ ಮಾಡಿಕೊಂಡು ಪ್ರಚಾರ ಮಾಡುತ್ತಿರುವ ಕುರಿತು ದಾಖಲೆ ಬಿಡುಗಡೆ ಮಾಡಿ, ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಉಚಿತವಾಗಿ ವಿತರಿಸುವ ರಾಜ್ಯ ಸರಕಾರದ ಮುದ್ರೆಯ ಸಕ್ಕರೆ ಇತರೆ ಪದಾರ್ಥಗಳ ಪೊಟ್ಟಣ ಬದಲಿಸಿ, ಬಿಜೆಪಿ ಪಕ್ಷದ ಚಿಹ್ನೆಯುಳ್ಳ ಚೀಲ ಹಾಕಿ ಹಂಚಲು ತಯಾರಿ ನಡೆಸಿದ್ದು ಅತ್ಯಂತ ನಾಚಿಕೆಗೇಡು ಎಂದು ಟೀಕಿಸಿದರು.

ಲಾಕ್‍ಡೌನ್ ಹಿನ್ನೆಲೆ ಜನಸಾಮಾನ್ಯರಿಗೆ ಹಂಚಲು ತಂದಿದ್ದ ಆಹಾರ ಪದಾರ್ಥಗಳ ವಿಚಾರದಲ್ಲೂ, ಬಿಜೆಪಿ ರಾಜಕೀಯ ಮಾಡುತ್ತಿದ್ದು, ಬಿಟ್ಟಿ ಪ್ರಚಾರಕ್ಕೆ ಕೀಳು ಮಾರ್ಗ ಹಿಡಿದಿದೆ. ತಪ್ಪಿತಸ್ಥರನ್ನು ಸಾಕ್ಷಿ ಸಮೇತ ಹಿಡಿದುಕೊಟ್ಟಿದ್ದೇವೆ. ರಾಜ್ಯ ಬಿಜೆಪಿ ಸರಕಾರಕ್ಕೆ ಸ್ವಲ್ಪವಾದರೂ ನೈತಿಕತೆ ಇದ್ದರೆ ತಪ್ಪಿತಸ್ಥರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಸರಕಾರದ ವತಿಯಿಂದ ಮಕ್ಕಳು, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ನೀಡಲು ಮೀಸಲಿಟ್ಟ ಆಹಾರ ಪದಾರ್ಥಗಳನ್ನು ಅಕ್ರಮವಾಗಿ ಬಿಜೆಪಿ ನಾಯಕರು ತಮ್ಮ ಹೆಸರಿನ ಪ್ಯಾಕೆಟ್‍ನಲ್ಲಿ ಹಾಕಿಕೊಂಡು ಹಂಚಿಕೆ ಮಾಡುತ್ತಿದ್ದಾರೆ. ಇದು ಕಾನೂನು ಪ್ರಕಾರ ಅಪರಾಧವಾಗಿದೆ. ಅಷ್ಟೇ ಅಲ್ಲದೆ, ಕಾಂಗ್ರೆಸ್ ನಾಯಕರಾದ ಡಿ.ಕೆ.ಸುರೇಶ್, ವಿ.ಎಸ್ ಉಗ್ರಪ್ಪ ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳೇ ಈ ವಿಚಾರದಲ್ಲಿ ನಾನಿನ್ನು ಮನವಿ ಮಾಡಿಕೊಳ್ಳುವುದಿಲ್ಲ. ಕೂಡಲೇ ತಪ್ಪಿತಸ್ಥರನ್ನು ಬಂಧಿಸದಿದ್ದರೆ ನಾವು ರಸ್ತೆಗಿಳಿದು ಹೋರಾಟ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು.

ಮಕ್ಕಳು, ಮಹಿಳೆಯರಿಗೆ ಕೊಡಬೇಕಾದ ಪದಾರ್ಥಗಳ ದುರುಪಯೋಗದಲ್ಲಿ ಯಡಿಯೂರಪ್ಪ ಅವರ ತಪ್ಪಿದೆ ಎಂದು ಹೇಳುತ್ತಿಲ್ಲ, ಆದರೆ, ಅವರ ಹಿಂದೆ ಇರುವವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ಅವರು, ಕಳೆದ ವಾರ ಅಕ್ಕಿಯ ಅಕ್ರಮ ಸಂಗ್ರಹ, ಮಾರಾಟವನ್ನು ಬಯಲು ಮಾಡಿದ್ದೆವು, ಬಹಳ ಶ್ರಮವಹಿಸಿ ಅದನ್ನು ಮುಚ್ಚಿಹಾಕಲು ಯತ್ನಿಸಿದರು. ಯಾವ ಯಾವ ಜಿಲ್ಲೆಗೆ ಎಷ್ಟು ಪ್ರಮಾಣದ ಅಕ್ಕಿ ಹೋಗುತ್ತಿದೆ ಎನ್ನುವ ಸ್ಪಷ್ಟ ಮಾಹಿತಿ ನನಗಿದೆ. ಅಲ್ಲದೆ, ಸರಕಾರಕ್ಕೆ ಸಹಕಾರ ನೀಡಿದ ಮಾತ್ರಕ್ಕೆ ಅವರ ಭ್ರಷ್ಟಾಚಾರಕ್ಕೆ ನಮ್ಮ ಸಮ್ಮತಿ ಇದೆ ಎಂದು ಅರ್ಥವಲ್ಲ ಎಂದು ಡಿ.ಕೆ.ಶಿವಕುಮಾರ್ ನುಡಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News