×
Ad

ಕೊರೋನ ಸರ್ವೇ: ಶಿಕ್ಷಕರಿಗೆ ಉತ್ತಮ ಸೌಲಭ್ಯ ಕಲ್ಪಿಸಲು ದಸಂಸ ಒತ್ತಾಯ

Update: 2020-05-03 22:37 IST

ಬೆಂಗಳೂರು, ಮೇ. 3: ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಸರ್ವೇ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ರಾಜ್ಯ ಸರಕಾರ ಉತ್ತಮ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಆಗ್ರಹಿಸಿದ್ದಾರೆ.

ಸರ್ವೆ ಕಾರ್ಯದಲ್ಲಿ ತೊಡಗಿರುವ ಶಿಕ್ಷಕರಿಗೆ ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ನೀಡಬೇಕು. ಯಾವ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೋ ಅದೇ ಸ್ಥಳದಲ್ಲಿ ಶಿಕ್ಷಕರನ್ನು ನಿಯೋಜಿಸಬೇಕು. ಉತ್ತರದಿಂದ ದಕ್ಷಿಣಕ್ಕೆ ಅಥವಾ ದಕ್ಷಿಣದಿಂದ ಉತ್ತರಕ್ಕೆ ಶಿಕ್ಷಕರ ನಿಯೋಜನೆ ಸರಿಯಲ್ಲ. ಇದರಿಂದ ಲಾಕ್‍ಡೌನ್ ಸಂದರ್ಭದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಅನಾನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಸರಕಾರಿ ಶಾಲಾ ಶಿಕ್ಷಕರಿಗೆ ಸ್ವಂತ ವಾಹನಗಳನ್ನು ಬಳಸಿದರೆ ಅವರಿಗೆ ಪೊಲೀಸ್ ಇಲಾಖೆ ಸೂಕ್ತ ಪಾಸ್ ವ್ಯವಸ್ಥೆ ಮಾಡಬೇಕು. ಕೊರೋನ ಸೋಂಕು ನಿಯಂತ್ರಣಕ್ಕೆ ಕೆಲಸ ಮಾಡುವ ಶಿಕ್ಷಕರಿಗೆ ಸೂಕ್ತ ಸೌಲಭ್ಯ ಕಲ್ಪಿಸುವ ಬಗ್ಗೆ ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರು ಗಮನಹರಿಸಬೇಕು ಎಂದು ಲಕ್ಷ್ಮಿ ನಾರಾಯಣ ನಾಗವಾರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News