×
Ad

ರೌಡಿ ಬಿಜ್ಜು ಕೊಲೆ ಪ್ರಕರಣ: ಆರೋಪಿ ಬಂಧನ

Update: 2020-05-04 23:14 IST

ಬೆಂಗಳೂರು, ಮೇ 4: ರೌಡಿ ಮರಿಯಾ ದಿಲೀಪ್ ಯಾನೆ ಬಿಜ್ಜು ಕೊಲೆ ಪ್ರಕರಣ ಸಂಬಂಧ ಕೆಜಿ ಹಳ್ಳಿ ಠಾಣಾ ಪೊಲೀಸರು ಆರೋಪಿ ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಳೇ ಬಾಗಲೂರು ಲೇಔಟ್‍ನ ಆಂಡ್ರ್ಯೂ(19) ಎಂಬಾತ ಬಂಧಿತ ಆರೋಪಿಯಾಗಿದ್ದು, ಗುಂಡೇಟಿನಿಂದ ಎಡಗಾಲಿಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿದೆ.

ಮೇ 1 ರಂದು ರೌಡಿ ಬಿಜ್ಜು(39) ಅನ್ನು ದುಷ್ಕರ್ಮಿಗಳು ಇಲ್ಲಿನ ಬಾಗಲೂರು ಲೇಔಟ್‍ನ  ಬಳಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಕಾಡುಗೊಂಡನಹಳ್ಳಿ ಪೊಲೀಸರಿಗೆ ಆರೋಪಿ ಆಂಡ್ರ್ಯೂ ತನ್ನ ಸಹಚರರ ಜೊತೆ ಸೇರಿ ಹಳೆ ದ್ವೇಷದ ಹಿನ್ನಲೆಯಲ್ಲಿ ಕೊಲೆಗೈದಿರುವುದು ಪತ್ತೆಯಾಗಿದೆ.

ಆಂಡ್ರ್ಯೂ ಅವರ ಸಂಬಂಧಿಯೊಬ್ಬರನ್ನು ರೌಡಿ ದಿಲೀಪ್ ಸೇರಿ ಇತರರು ಕೊಲೆ ಮಾಡಿದ್ದರು. ಇದರ ದ್ವೇಷದಿಂದ ದಿಲೀಪ್ ಅನ್ನು ಸಂಚು ರೂಪಿಸಿ ಆಂಡ್ತ್ಯೂ ಕೊಲೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೋಮವಾರ ಮುಂಜಾನೆ ಆರೋಪಿ ನೆಲೆಸಿರುವ ಸ್ಥಳ ಪತ್ತೆಮಾಡಿದ ಪೊಲೀಸರು, ಕಾರ್ಯಾಚರಣೆ ಕೈಗೊಂಡಿದ್ದು, ಬಂಧಿಸಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಇನ್ಸ್‍ಪೆಕ್ಟರ್ ಅಜಯ್ ಸಾರಥಿ ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಯತ್ನಿಸಿದಾಗ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು ಅದು ಎಡಗಾಲಿಗೆ ತಗುಲಿ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News