ಯುಎಇಯಿಂದ ಮರಳುವ ಅನಿವಾಸಿ ಭಾರತೀಯರ ವಿಮಾನ ಟಿಕೆಟ್ ದರ ದುಬಾರಿ?

Update: 2020-05-05 14:59 GMT

ದುಬೈ, ಮೇ 5: ಯುಎಇಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಹೋಗುವ ವಿಮಾನಗಳ ಟಿಕೆಟ್ ದರ ಸಾಮಾನ್ಯಕ್ಕಿಂತ ದುಬಾರಿಯಾಗುವ ಸಾಧ್ಯತೆಯಿದ್ದು, ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯ ವಲಸಿಗರ ಆತಂಕಕ್ಕೆ ಕಾರಣವಾಗಿದೆ.

ಯುಎಇಯಿಂದ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಹೋಗುವ ಕಾರ್ಯ ಮೇ 7ರಂದು ಆರಂಭವಾಗಲಿದೆ. ಸುಮಾರು 2 ಲಕ್ಷ ಭಾರತೀಯರು ವಾಪಸಾತಿಗಾಗಿ ತಮ್ಮ ಹೆಸರುಗಳನ್ನು ವೆಬ್‌ಸೈಟ್ ಮೂಲಕ ನೋಂದಾಯಿಸಿಕೊಂಡಿದ್ದಾರೆ.

ದುಬೈಯಿಂದ ದಿಲ್ಲಿಗೆ ಹೋಗುವ ಏಕಮುಖ ವಿಮಾನ ಟಿಕೆಟ್ ದರ ಸುಮಾರು 1,400 (ಸುಮಾರು 28,850 ರೂಪಾಯಿ) ರಿಂದ 1,650 ದಿರ್ಹಮ್ (ಸುಮಾರು 34,000 ರೂಪಾಯಿ) ಆಗಬಹುದು. ಸಾಮಾನ್ಯ ಸಂದರ್ಭದಲ್ಲಾದರೆ, ಈ ತಿಂಗಳುಗಳಲ್ಲಿ ಈ ಮಾರ್ಗದ ಟಿಕೆಟ್ ದರ 600 (ಸುಮಾರು 12,350 ರೂಪಾಯಿ)ರಿಂದ 700 ದಿರ್ಹಮ್ (ಸುಮಾರು 14,400 ರೂಪಾಯಿ) ಆಗುತ್ತಿತ್ತು ಎಂದು ವಿಮಾನಯಾನ ಸಂಸ್ಥೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಳುತ್ತಾರೆ.

ಏಕಮುಖ ಕೇರಳ ಪ್ರಯಾಣದ ಟಿಕೆಟ್ ದರ ಸುಮಾರು 1,900 (ಸುಮಾರು 39,100 ರೂಪಾಯಿ) ರಿಂದ 2,300 ದಿರ್ಹಮ್ (ಸುಮಾರು 47,400 ರೂಪಾಯಿ) ಆಗಬಹುದು ಎಂದು ಅವರು ಅಭಿಪ್ರಾಯಪಡುತ್ತಾರೆ.

ಈ ವಿಮಾನಗಳಲ್ಲಿ ಪ್ರಯಾಣಿಸಲಿರುವ ಭಾರತೀಯ ವಲಸಿಗರು ಒಂದೋ ಯುಎಇಯಲ್ಲಿ ಕೆಲಸ ಕಳೆದುಕೊಂಡವರಾಗಿದ್ದಾರೆ ಅಥವಾ ಕೆಲಸಕ್ಕೆ ಸಂಬಂಧಿಸಿ ಅನಿಶ್ಚಿತತೆಗಳು ಎದುರಾಗಿರುವ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರನ್ನು ಭಾರತಕ್ಕೆ ಕಳುಹಿಸುವವರಾಗಿದ್ದಾರೆ. ಹಾಗಾಗಿ, ಈ ಅಧಿಕ ವಿಮಾನ ಟಿಕೆಟ್ ದರ ಅವರಿಗೆ ಹೊರೆಯಾಗಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News