ಕ್ಷುಲ್ಲಕ ಕಾರಣಕ್ಕೆ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು, ಬಂಧನ

Update: 2020-05-06 12:56 GMT

ಬೆಂಗಳೂರು,  ಮೇ 6: ಕ್ಷುಲ್ಲಕ ಕಾರಣಕ್ಕೆ ಗೆಳೆಯನನ್ನು ಕೊಲೆ ಮಾಡಿದ್ದ ಪ್ರಕರಣದ ಆರೋಪಿಯ ಕಾಲಿಗೆ ಪೊಲೀಸರು ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಗುಂಡೇಟು ತಗುಲಿ ಗಾಯಗೊಂಡ ಸಿಡದೇನಹಳ್ಳಿಯ ವಿಶ್ವೇಶ್ವರಯ್ಯ ಲೇಔಟ್‍ನ ಪ್ರಭು(25) ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆಯಲ್ಲಿ ಮುಖ್ಯಪೇದೆ ಹನುಮೇಗೌಡ ಸಹ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇ 4 ರಂದು ಮದ್ಯದ ಅಂಗಡಿಗಳು ತೆರೆದಿದ್ದರಿಂದ ಪ್ರಭು ತನ್ನ ಸ್ನೇಹಿತರ ಜೊತೆ ಮದ್ಯ ಖರೀದಿಸಿ ತಂದು ಇಲ್ಲಿನ ಸಿಡೇದಹಳ್ಳಿಯ ಖಾಲಿ ಮನೆಯೊಂದರಲ್ಲಿ ಸೇವನೆ ಮಾಡಿದ್ದ. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಪ್ರಭು, ಕ್ಷುಲ್ಲಕ ಕಾರಣಕ್ಕೆ ಜೊತೆಯಲ್ಲಿ ಇದ್ದ ರೌಡಿ ಸಿಂಗ್‍ನೊಂದಿಗೆ ಜಗಳ ಮಾಡಿ ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಪ್ರಕರಣದ ಪ್ರಮುಖ ಆರೋಪಿ ಪ್ರಭು, ಬುಧವಾರ ಇಲ್ಲಿನ ಸಾಸಿವೆಘಟ್ಟದ ಬಳಿ ಬೈಕ್‍ನಲ್ಲಿ ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಬಾಗಲಗುಂಟೆಯ ಸಬ್‍ಇನ್‍ಸ್ಪೆಕ್ಟರ್ ಶ್ರೀಕಂಠೇಗೌಡ, ಮುಖ್ಯಪೇದೆ ಹನುಮೇಗೌಡ ಮತ್ತವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಭುವಿನ ಬೈಕ್ ಅಡ್ಡಗಟ್ಟಿ ಬಂಧಿಸಲು ಹೋದಾಗ ಹನುಮೇಗೌಡ ಅವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಪ್ರಭು ಕಾಲಿಗೆ ಪಿಸ್ತೂಲಿನಿಂದ ಗುಂಡು ಹಾರಿಸಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News