ಓವರ್ ಸ್ಮಾರ್ಟ್ ಒಳ್ಳೆಯದಲ್ಲ: ಡಿಕೆಶಿಗೆ ಸಚಿವ ಆರ್.ಅಶೋಕ್ ತಿರುಗೇಟು
ಬೆಂಗಳೂರು, ಮೇ 6: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿಧಾನ ಮಂಡಲ ಅಧಿವೇಶನ ಕರೆಯುವಂತೆ ಆಗ್ರಹಿಸಿದ್ದಾರೆ. ಆದರೆ, ಕೇಂದ್ರ ಸರಕಾರ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದೆ. ಅವರು ನೂತನವಾಗಿ ಅಧ್ಯಕ್ಷರಾಗಿದ್ದು, ಹೊಸದಾಗಿ ಮದುವೆಯಾಗಿರುವವರಂತೆ ಕನಸು ಕಾಣುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿರುಗೇಟು ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೊಸದಾಗಿ ಮದುವೆ ಆದವರಿಗೆ ಇರುವಂತೆ ಡಿ.ಕೆ.ಶಿವಕುಮಾರ್ ಅವರಿಗೆ ಆಸೆ, ಆಕಾಂಕ್ಷೆಗಳು ಇವೆ. ಅವರು ಸ್ಮಾರ್ಟ್ ಆಗಬೇಕೇ ಹೊರತು ಓವರ್ ಸ್ಮಾರ್ಟ್ ಆಗುವುದು ಒಳ್ಳೆಯದಲ್ಲ ಎಂದು ಲೇವಡಿ ಮಾಡಿದರು.
ಡಿ.ಕೆ.ಶಿವಕುಮಾರ್ ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಅವರಿಗೆ ಹಣ ಕೊಡಬೇಕು ಎಂಬ ಮನಸ್ಸಿದ್ದರೆ ಸಂಕಷ್ಟದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೆ 20 ಸಾವಿರ ರೂ. ನೀಡಲಿ. ಜನರಿಗೆ ಸಹಾಯವಾಗಲಿದೆ. ಶಿವಕುಮಾರ್ ಅವರೇ ನಿಮ್ಮ ಅಕ್ಕ ಪಕ್ಕದಲ್ಲಿ ಸಿದ್ದರಾಮಯ್ಯ ಮತ್ತು ಡಾ.ಜಿ.ಪರಮೇಶ್ವರ್ ಅವರಿದ್ದಾರೆ ಎಂದು ಟೀಕಿಸಿದರು.
ಶಿವಕುಮಾರ್ ಅವರು ಮೊದಲು ಪಕ್ಷದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷರು ಯಾರು? ಚೆಕ್‍ಗಳಿಗೆ ಯಾರು ಸಹಿ ಹಾಕಬೇಕೆಂದು ಅವರು ಮೊದಲು ತೀರ್ಮಾನ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ ಅಶೋಕ್, ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ತಡೆ ಹಿಡಿದಿಲ್ಲ ಎಂದು ಸ್ಪಷ್ಟಪಡಿಸಿದರು.
ಕೆಲ ಕಂಪೆನಿಗಳು ಕಾರ್ಮಿಕರಿಗೆ ವೇತನ ನೀಡಿಲ್ಲ ಎಂಬ ದೂರುಗಳ ಹಿನ್ನೆಲೆಯಲ್ಲಿ ಮಾಲಕರ ಜೊತೆ ಚರ್ಚಿಸಿ ಅವರಿಗೆ ವೇತನ ಕೊಡಿಸಲಾಗಿದೆ. ಅಲ್ಲದೆ ಕಾರ್ಮಿಕರಿಗೆ 20 ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳನ್ನು ನೀಡಲಾಗಿದೆ. ಪಶ್ಚಿಮ ಬಂಗಾಳ ಕಾರ್ಮಿಕರನ್ನು ಕರೆಸಿಕೊಳ್ಳಲು ನಿರಾಕರಿಸಿದೆ. ನಾವು ಯಾವುದೇ ಕಾರ್ಮಿಕರನ್ನು ತಡೆಹಿಡಿಯುವುದಿಲ್ಲ ಎಂದರು.
ರಾಜ್ಯದಿಂದ ಈವರೆಗೂ ಒಟ್ಟು 9,600 ಮಂದಿ ಕಾರ್ಮಿಕರು ಒರಿಸ್ಸಾ, ಜಾರ್ಖಂಡ್ ಸೇರಿದಂತೆ ಇನ್ನಿತರ ರಾಜ್ಯಗಳಿಗೆ ತೆರಳಿದ್ದಾರೆ. ಅಲ್ಲದೆ, ಒಟ್ಟು 86 ಸಾವಿರ ಕಾರ್ಮಿಕರು ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಗಿದ್ದಾರೆ. ನಾಳೆ(ಮೇ 7) ಕೂಲಿ ಕಾರ್ಮಿಕರು ತೆರಳಲು ಸರಕಾರ ವ್ಯವಸ್ಥೆ ಮಾಡಿದೆ ಎಂದರು.
ಬೆಂಗಳೂರಿನಲ್ಲಿಯೇ ಕ್ವಾರಂಟೈನ್
ವಿದೇಶದಿಂದ ರಾಜ್ಯಕ್ಕೆ ಹಿಂದಿರುಗುವ ಕನ್ನಡಿಗರನ್ನು ಅವರವರ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡುವ ಬದಲು ಬೆಂಗಳೂರಿನಲ್ಲೆ ಕ್ವಾರಂಟೈನ್ ಮಾಡಲಾಗುತ್ತದೆ. ರಾಜ್ಯಕ್ಕೆ ವಾಪಸ್ ಆಗಲು ವಿದೇಶದಲ್ಲಿರುವ 10,830 ಕನ್ನಡಿಗರು ನೋಂದಣಿ ಮಾಡಿಸಿದ್ದಾರೆ. ಆ ಪೈಕಿ 1,600 ಮಂದಿ ಸಮ್ಮತಿಸಿದ್ದಾರೆ ಎಂದು ಅವರು ತಿಳಿಸಿದರು.
ವಿದೇಶಗಳಿಂದ ಬರುವವರು ಅವರು ಬಯಸುವ ಹೊಟೇಲ್‍ಗೆ ಅವರೇ ದುಡ್ಡು ಕೊಡಬೇಕು. ಇಲ್ಲವಾದರೆ ನಾವು ಹೇಳುವ ಹೋಟೆಲ್‍ಗೆ ಅವರು ಹೋಗಬೇಕು. ಯಾವುದೇ ಕಾರಣಕ್ಕೂ ಕೊರೋನ ಸೋಂಕು ಹರಡದಂತೆ ರಾಜ್ಯ ಸರಕಾರ ಸೂಕ್ತ ಮುನ್ನಚ್ಚರಿಕೆ ವಹಿಸಲಿದ್ದು, ಜನರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ ಎಂದರು