ಯುಎಇಯಿಂದ ಮರಳಲು ಕೊರೋನ ಲಕ್ಷಣರಹಿತ ಭಾರತೀಯರಿಗೆ ಮಾತ್ರ ಅವಕಾಶ

Update: 2020-05-06 14:45 GMT

ದುಬೈ,ಮೇ 6: ಕೋವಿಡ್-19 ಲಾಕ್‌ಡೌನ್‌ ನಿಂದಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನ ಪ್ರಜೆಗಳನ್ನು ಸ್ವದೇಶಕ್ಕೆ ವಾಪಸ್ ಕರೆತರಲು ಭಾರತವು ಹಮ್ಮಿಕೊಂಡಿರುವ ಬೃಹತ್ ತೆರವು ಕಾರ್ಯಾಚರಣೆ ಗುರುವಾರ ಆರಂಭಗೊಳ್ಳಲಿದೆ. ಯುಎಇ ಅಧಿಕಾರಿಗಳಿಂದ ಅನುಮತಿಸಲ್ಪಟ್ಟಿರುವ ಮತ್ತು ಯಾವುದೇ ಲಕ್ಷಣಗಳಿಲ್ಲದ ವ್ಯಕ್ತಿಗಳು ಮಾತ್ರ ಸ್ವದೇಶಕ್ಕೆ ವಿಮಾನವನ್ನೇರಲು ಅವಕಾಶ ನೀಡಲಾಗುವುದು ಎಂದು ಅಬುಧಾಬಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಬುಧವಾರ ಪ್ರಕಟಿಸಿದೆ.

ಭಾರತವು ಈ ತೆರವು ಕಾರ್ಯಾಚರಣೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 64 ವಿಮಾನಯಾನಗಳನ್ನು ನಿರ್ವಹಿಸಲಿದೆ.

ಗುರುವಾರ ದುಬೈನಿಂದ ಮೊದಲ ಎರಡು ವಿಶೇಷ ಯಾನಗಳಲ್ಲಿ ಕೇರಳಿಯರನ್ನು ಕರೆತರಲಾಗುವುದು. ಭಾರತಕ್ಕೆ ವಾಪಸಾಗಲು ಹೆಸರು ನೋಂದಾಯಿಸಿಕೊಂಡವರಲ್ಲಿ ಕೇರಳಿಯರು ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದು ಯುಎಇಯಲ್ಲಿ ಭಾರತದ ರಾಯಭಾರಿ ಪವನ ಕಪೂರ್ ತಿಳಿಸಿದ್ದಾರೆ.

ಭಾರತಕ್ಕೆ ಮರಳುವ ಎಲ್ಲ ಪ್ರಯಾಣಿಕರು ನಿರ್ಗಮನ ವಿಮಾನ ನಿಲ್ದಾಣಗಳಲ್ಲಿ ಅಗತ್ಯ ವೈದ್ಯಕೀಯ ತಪಾಸಣೆಗೆ ಒಳಪಡಬೇಕಿದೆ. ಯುಎಇ ಆರೋಗ್ಯಾಧಿಕಾರಿಗಳಿಂದ ಅನುಮತಿ ಪಡೆದಿರುವ ಮತ್ತು ರೋಗಲಕ್ಷಣ ರಹಿತ ವ್ಯಕ್ತಿಗಳು ಮಾತ್ರ ವಿಮಾನವನ್ನು ಹತ್ತಬಹುದಾಗಿದೆ.

ಗಮ್ಯ ಸ್ಥಳವನ್ನು ತಲುಪಿದ ಬಳಿಕ ಕಡ್ಡಾಯ ಕ್ವಾರಂಟೈನ್‌ಗೆ ಒಳಪಡುವುದಾಗಿ ಮತ್ತು ಅದರ ವೆಚ್ಚವನ್ನು ಸ್ವತಃ ಭರಿಸುವುದಾಗಿ ಎಲ್ಲ ಪ್ರಯಾಣಿಕರು ಮುಚ್ಚಳಿಕೆಗೆ ಸಹಿ ಹಾಕಬೇಕಾಗುತ್ತದೆ ಎಂದು ರಾಯಭಾರಿ ಕಚೇರಿಯು ತಿಳಿಸಿದೆ.

ಪ್ರತಿ ಪ್ರಯಾಣಿಕನಿಗೆ ವಿಮಾನವನ್ನು ಹತ್ತುವಾಗ ಮೂರು ಪದರಗಳ ಎರಡು ಫೇಸ್ ಮಾಸ್ಕ್‌ಗಳು, ಎರಡು ಜೊತೆ ಕೈಗವುಸುಗಳು ಮತ್ತು ಹ್ಯಾಂಡ್ ಸ್ಯಾನಿಟೈಸರ್‌ಗಳ ಪೌಚ್‌ಗಳು/ಸಣ್ಣ ಬಾಟ್ಲಿಗಳನ್ನೊಳಗೊಂಡ ಸುರಕ್ಷತಾ ಕಿಟ್ ನೀಡಲಾಗುವುದು. ಪ್ರಯಾಣಿಕರು ವಿಮಾನದಲ್ಲಿ ನಾಗರಿಕ ವಾಯುಯಾನ ಸಚಿವಾಲಯದ ಆರೋಗ್ಯ ಶಿಷ್ಟಾಚಾರವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಎಂದು ಅದು ಹೇಳಿದೆ.

‘ವಂದೇ ಭಾರತ ಮಿಷನ್’ ಎಂದು ಹೆಸರಿಸಲಾಗಿರುವ ಈ ತೆರವು ಕಾರ್ಯಾಚರಣೆಯ ಮೊದಲ ವಾರದಲ್ಲಿ ಯುಎಇಯಿಂದ ಭಾರತಕ್ಕೆ ಮರಳಲು ಬಯಸಿರುವ 2,000ಕ್ಕೂ ಕಡಿಮೆ ಭಾರತೀಯರನ್ನು ಆರು ರಾಜ್ಯಗಳಿಗೆ ತಲುಪಿಸಲಾಗುವುದು. ಗುರುವಾರ ಕೇರಳಕ್ಕೆ ತೆರಳಲಿರುವ ಮೊದಲ ಎರಡು ವಿಮಾನಯಾನಗಳಿಗೆ ಪ್ರತಿ ಪ್ರಯಾಣಿಕರಿಗೆ 725 ದಿರ್‌ಹಮ್‌ಗಳಿಂದ 750 ದಿರಹಮ್(15,000 ರೂ.ಗೂ ಹೆಚ್ಚು) ಪ್ರಯಾಣ ಶುಲ್ಕಗಳನ್ನು ನಿಗದಿಗೊಳಿಸಲಾಗಿದೆ. ಈ ಯಾನಗಳಲ್ಲಿ ಏರ್ ಇಂಡಿಯಾ ತನ್ನ 737-800 ಬೋಯಿಂಗ್ ವಿಮಾನಗಳನ್ನು ಕಾರ್ಯಾಚರಿಸಲಿದೆ. ಇವು 186 ಇಕಾನಮಿ ಕ್ಲಾಸ್ ಆಸನ ಸಾಮರ್ಥ್ಯ ಹೊಂದಿದ್ದು,ಒಂಭತ್ತು ಆಸನಗಳನ್ನು ಐಸೊಲೇಷನ್‌ಗಾಗಿ ಮೀಸಲಿಡಲಾಗುವುದು. ಕೇವಲ 177 ಪ್ರಯಾಣಿಕರು ಒಂದು ವಿಮಾನದಲ್ಲಿ ಪ್ರಯಾಣಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News