ರಾಜ್ಯದಲ್ಲಿ ಸೋಂಕು ಹೆಚ್ಚಾದರೆ ಸರಕಾರವೇ ಹೊಣೆ: ವೆಲ್ಫೇರ್ ಪಾರ್ಟಿ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್
Update: 2020-05-06 22:44 IST
ಬೆಂಗಳೂರು, ಮೇ 6: ರಾಜ್ಯದಲ್ಲಿ ಕೊರೋನ ಸೋಂಕು ಹೆಚ್ಚಾದರೆ ಅದಕ್ಕೆ ಸರಕಾರವೆ ನೇರ ಹೊಣೆಯಾಗುತ್ತದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಡ್ವಕೇಟ್ ತಾಹೀರ್ ಹುಸೇನ್ ಆರೋಪಿಸಿದ್ದಾರೆ.
ಅವಸರದ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯವನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡುತ್ತಿರುವುದು ಆತಂಕದ ಬೆಳವಣಿಗೆಯಾಗಿದೆ. ಅವಸರದ ನಿರ್ಧಾರದ ಮೂಲಕ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಟ್ಟಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.
ಯಡಿಯೂರಪ್ಪ ಅವರ ಅವಸರದ ಮತ್ತು ಪೂರ್ವ ಸಿದ್ಧತೆಯಿಲ್ಲದ ನಿರ್ಧಾರ ಬಹುತೇಕ ಕಡೆಗಳಲ್ಲಿ ಸಾಮಾಜಿಕ ಅಂತರವನ್ನು ಜನ ಪಾಲಿಸಿದಂತೆ ಕಾಣುತ್ತಿಲ್ಲ. ಇದರಿಂದಾಗಿ, ಕೊರೋನ ಸೋಂಕು ಉಲ್ಬಣಿಸಿದರೆ ಅದರ ಪೂರ್ಣ ಹೊಣೆಯನ್ನು ರಾಜ್ಯ ಸರಕಾರವೆ ಹೊರಬೇಕಾಗುತ್ತದೆ. ಆದುದರಿಂದ, ಈ ಸಂಬಂಧ ಮರುಪರಿಶೀಲನೆ ಮಾಡಿ ಬಡ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.