×
Ad

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ಟೈಪಂಡ್ ಹೆಚ್ಚಳಕ್ಕೆ ಪ್ರಸ್ತಾಪ ಸಲ್ಲಿಸಲು ಸಚಿವ ಸುಧಾಕರ್ ಸೂಚನೆ

Update: 2020-05-06 23:25 IST

ಬೆಂಗಳೂರು, ಮೇ 6: ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಬಹು ವರ್ಷಗಳ ಬೇಡಿಕೆಯಾಗಿರುವ ಸ್ಟೈಪಂಡ್ ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿರುವುದಾಗಿ ತಿಳಿದು ಬಂದಿದೆ.

ಕೊರೋನ ಸೋಂಕಿತನ ಸಂಪರ್ಕದ ಹಿನ್ನೆಲೆಯಲ್ಲಿ ಸ್ವಯಂ ಗೃಹ ದಿಗ್ಭಂದನದಲ್ಲಿರುವ ಸಚಿವರು ಇಲಾಖೆ ಪ್ರಮುಖರ ಜತೆ ನಡೆಸಿದ ವಿಡಿಯೋ ಸಮಾಲೋಚನೆ ಸಂದರ್ಭದಲ್ಲಿ ಈ ಕುರಿತು ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದ ಪಿಜಿ ವಿದ್ಯಾರ್ಥಿಗಳು ಬಹು ದಿನಗಳ ಈ ಬೇಡಿಕೆಯನ್ನು ಮಾನ್ಯ ಮಾಡುವಂತೆ ಆಗ್ರಹಿಸಿದ್ದರು. ವಿಡಿಯೋ ಸಂವಾದ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕುಲಪತಿ ಡಾ. ಸಚ್ಚಿದಾನಂದ ಮತ್ತು ಡಿಎಂಇ ಡಾ. ಗಿರೀಶ್ ಅವರುಗಳಿಗೆ ಸ್ಟೈಪಂಡ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಪಿಜಿ ವಿದ್ಯಾರ್ಥಿಗಳಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ತೆ, ರಾಜ್ಯದಲ್ಲಿ ಯಾವ ವರ್ಷ ಎಷ್ಟು ಹೆಚ್ಚಳ ಮಾಡಲಾಗಿತ್ತು ಎಂಬ ವಿವರಗಳನ್ನು ಸಚಿವರು ಸಂವಾದ ಸಂದರ್ಭದಲ್ಲಿ ಪಡೆದರು ಎಂದು ತಿಳಿದು ಬಂದಿದೆ. ಹೆಚ್ಚಳದ ಪ್ರಮಾಣ ಮತ್ತು ವಾರ್ಷಿಕ ಬೇಕಾದ ಅನುದಾನದ ಬಗ್ಗೆಯೂ ಮಾಹಿತಿ ಪಡೆದ ಸಚಿವರು, ಅಗತ್ಯ ಸೂಚನೆಗಳ ಸಹಿತ ಪರಿಷ್ಕರಣೆಗೆ ಕ್ರಮ ಜರುಗಿಸಲು ಸೂಚಿಸಿದರು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News