ಬಿಜೆಪಿ ಸಂಸದರೊಬ್ಬರಿಗೆ, ಕುಟುಂಬಕ್ಕೆ ಕ್ವಾರಂಟೈನ್

Update: 2020-05-07 04:22 GMT

ಜಮ್ಮು, ಮೇ 7: ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೇಹ್ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಸಂಸದರು ಜಮ್ಮುವಿನಿಂದ ರಸ್ತೆ ಮೂಲಕ ಬಂದ ಹಿನ್ನೆಲೆಯಲ್ಲಿ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಕ್ವಾರಂಟೈನ್ ವಿಧಿಸಲಾಗಿದೆ ಎಂದು ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ.

ಅವರ ಮನೆಯ ಮುಂದೆ, ಜಿಲ್ಲಾ ವಿಕೋಪ ನಿರ್ವಹಣೆ ಪ್ರಾಧಿಕಾರ ಸಂದರ್ಶಕರಿಗೆ ಅವಕಾಶವಿಲ್ಲ ಎಂಬ ನೋಟಿಸ್ ಹಚ್ಚಿದೆ. ಮೇ 5ರಿಂದ ಆರಂಭವಾಗುವಂತೆ ಮನೆಯಲ್ಲಿರುವ ಎಲ್ಲ ಐದು ಮಂದಿಗೆ 14 ದಿನಗಳ ವರೆಗೆ ಕ್ವಾರಂಟೈನ್ ವಿಧಿಸಲಾಗಿದೆ ಎಂದು ವಿವರಿಸಲಾಗಿದೆ. ತ್ಸೆರಿಂಗ್ ನಂಗ್ಯಾಲ್ ಅವರು ಕುಟುಂಬದ ಜತೆ ಮಂಗಳವಾರ ಜಮ್ಮುವಿನಿಂದ ವಾಪಸ್ಸಾಗಿದ್ದರು.

ಕೋವಿಡ್-19 ಸಾಂಕ್ರಾಮಿಕ ತಡೆ ಶಿಷ್ಟಾಚಾರಕ್ಕೆ ಅನುಗುಣವಾಗಿ ಸಂಸದರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದು ವಿಭಾಗೀಯ ಆಯುಕ್ತ ಸೌಗತ್ ಬಿಸ್ವಾಸ್ ಸ್ಪಷ್ಟಪಡಿಸಿದ್ದಾರೆ. ದೇಶದ ಇತರೆಡೆಗಳಿಂದ ಲಡಾಖ್‌ಗೆ ಆಗಮಿಸುವ ಎಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗುವುದು. ಕಳೆದ ಒಂದು ವಾರದಲ್ಲಿ ದೇಶದ ವಿವಿಧೆಡೆ ಸಿಕ್ಕಿ ಹಾಕಿಕೊಂಡಿರುವ 1,000ಕ್ಕೂ ಹೆಚ್ಚು ಮಂದಿ ಲಡಾಖ್‌ಗೆ ಮರಳಿದ್ದಾರೆ ಎಂದು ಅವರು ವಿವರಿಸಿದ್ದಾರೆ.

ದೇಶದ ವಿವಿಧೆಡೆಗಳಲ್ಲಿ ಸಿಕ್ಕಿ ಹಾಕಿಕೊಂಡಿರುವ ಲೇಹ್ ಮೂಲದ ಜನರನ್ನು ಹುಟ್ಟೂರಿಗೆ ವಾಪಸ್ ಕರೆಸಿಕೊಳ್ಳುವಲ್ಲಿ ಆಡಳಿತ ಯಂತ್ರ ವಿಫಲವಾಗಿದೆ ಎಂದು ಆಪಾದಿಸಿ ಲಡಾಖ್ ಸ್ವಾಯತ್ತ ಬೆಟ್ಟ ಅಭಿವೃದ್ಧಿ ಮಂಡಳಿಯ ಎಕ್ಸಿಕ್ಯೂಟಿವ್ ಕೌನ್ಸಿಲರ್ ಮತ್ತು ಅವರ ಸಹಾಯಕರು ಲೆಫ್ಟಿನೆಂಟ್ ಗವರ್ನರ್ ನಿವಾಸದ ಮುಂದೆ ಧರಣಿ ನಡೆಸಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿ ಬಿಜೆಪಿ ಲಡಾಖ್ ಘಟಕದ ಅಧ್ಯಕ್ಷ ಚೆರಿಂಗ್ ದೋರ್ಜೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News