ಲಾಕ್‍ಡೌನ್ ಉಲ್ಲಂಘಿಸಿದರೆ ಹಸಿರು ವಲಯಗಳು ಕಂಟೈನ್ಮೆಂಟ್ ಝೋನ್ ಆಗಿ ಬದಲು: ಡಾ.ಸುಧಾಕರ್ ಎಚ್ಚರಿಕೆ

Update: 2020-05-07 16:39 GMT

ಬೆಂಗಳೂರು, ಮೇ 7: ಮಾರಕ ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಸರಕಾರದ ಹೇರಿರುವ ಮಾರ್ಗಸೂಚಿ ಸಾರ್ವಜನಿಕರು ಪಾಲಿಸದಿದ್ದರೆ ಹಸಿರು ವಲಯಗಳಲ್ಲಿರುವ ಪ್ರದೇಶಗಳ ಸೋಂಕಿತರಿರುವ ಕಂಟೈನ್ಮೆಂಟ್ ಝೋನ್(ಕೆಂಪು ವಲಯ)ಗಳಾಗಿ ಬದಲಾಗಲಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಇಂದಿಲ್ಲಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹಾಗೂ ಸುಧಾಕರ್ ಜಂಟಿ ಸುದ್ದಿಗೋಷ್ಟಿಯಲ್ಲಿ ನಡೆಸಿದರು. ಈ ವೇಳೆ ಮಾತನಾಡಿದ ಸುಧಾಕರ್, ನಾವು ನಾಲ್ವರು ಸಚಿವರು ಖಾಸಗಿ ಸುದ್ದಿವಾಹಿನಿ ಕ್ಯಾಮರಾಮನ್ ಸಂಪರ್ಕದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಒಳಗಾದ್ದು, ಅವಧಿ ಪೂರ್ಣಗೊಂಡಿದೆ ಎಂದರು.

ಸಾರ್ವಜನಿಕರು, ನಮ್ಮ ಅಕ್ಕಪಕ್ಕದ ಪ್ರದೇಶದಲ್ಲಿ ಸೋಂಕು ಇಲ್ಲ. ನಮಗೆ ಯಾವುದೇ ಕಾರಣಕ್ಕೂ ಸೋಂಕು ಹರಡಲು ಸಾಧ್ಯವಿಲ್ಲ. ಕೊರೋನ ಸೋಂಕು ಹೋಗಿದೆ ಎಂಬ ಮನಸ್ಥಿತಿಯಲ್ಲಿ ಮನಸೋ ಇಚ್ಛೆ ಸಂಚಾರ ಮಾಡುತ್ತಿದ್ದಾರೆ. ಈ ರೀತಿಯ ಉಪೇಕ್ಷೆ ಯಾವುದೇ ಕಾರಣಕ್ಕೂ ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಆರೋಗ್ಯ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ನೀಡಲಾಗಿದೆ. ಅದನ್ನು ಪಾಲನೆ ಮಾಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಸುಧಾಕರ್ ಸಲಹೆ ಮಾಡಿದರು.

ಜನರು ಲಾಕ್‍ಡೌನ್ ಉಲ್ಲಂಘಿಸಿದರೆ ಹಸಿರು ವಲಯಗಳಾಗಿರುವ ಪ್ರದೇಶಗಳು ಕಂಟೈನ್ಮೆಂಟ್ ಝೋನ್‍ಗಳಾಗಲಿವೆ. ವಿದೇಶದಿಂದ ಕನ್ನಡಿಗರು ರಾಜ್ಯಕ್ಕೆ ಆಗಮಿಸುತ್ತಿದ್ದು, ಸರಕಾರ ಅವರೆಲ್ಲರ ಕ್ವಾರಂಟೈನ್ ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಜನರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅವರು ಅಭಯ ನೀಡಿದರು.

ಸುದ್ದಿಗೋಷ್ಟಿಯಲ್ಲಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮಾತನಾಡಿ, ಸುದ್ದಿ ವಾಹಿನಿ ಕ್ಯಾಮರಮನ್ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಕೊರೋನ ಸೋಂಕು ಪರೀಕ್ಷೆಗೊಳಗಾಗಿದ್ದೆವು. ಇದೀಗ ವರದಿಯು ನೆಗೆಟಿವ್ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಸ್ವಯಂ ಕ್ವಾರಂಟೈನ್‍ನಲ್ಲಿದ್ದೆವು ಎಂದರು.

ಬಿಬಿಎಂಪಿ ಆಯುಕ್ತರು ಕರೆ ಮಾಡಿ ಸೋಂಕಿತ ವ್ಯಕ್ತಿಯೊಂದಿಗೆ ಪ್ರಾಥಮಿಕ ಸಂಪರ್ಕದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ನಲ್ಲಿ ಇರಬೇಕು ಎಂದು ಸೂಚಿಸಿದ್ದರು. ಸೋಂಕಿತ ವ್ಯಕ್ತಿಗೂ ನನ್ನ ಪ್ರವಾಸಕ್ಕೂ ಹೋಲಿಕೆಯಾಗುತ್ತಿರಲಿಲ್ಲ. ಆದರೂ ಅಪವಾದ ಬರಬಾರದೆಂದು ಕ್ವಾರಂಟೈನ್‍ಗೊಳಗಾಗಿದ್ದೆ. ಸೋಂಕು ನಿಯಂತ್ರಣಕ್ಕೆ ಸಾರ್ವಜನಿಕರು ಸರಕಾರದೊಂದಿಗೆ ಸಹಕರಿಸಬೇಕು'

-ಸಿ.ಟಿ.ರವಿ, ಪ್ರವಾಸೋದ್ಯಮ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News