×
Ad

ಲಾಕ್‍ಡೌನ್ ನಡುವೆಯೂ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡಚಣೆಯಿಲ್ಲ: ಸಿಎಂ ಯಡಿಯೂರಪ್ಪ

Update: 2020-05-07 22:17 IST

ಬೆಂಗಳೂರು, ಮೇ 7: ಕೊರೋನ ವೈರಸ್‍ನಿಂದಾಗಿ ಲಾಕ್‍ಡೌನ್ ಘೋಷಣೆಯಾದಾಗಿನಿಂದಲೂ ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ ಯಾವುದೇ ಅಡಚಣೆ ಇಲ್ಲದೆ ಮುಂದುವರಿಸಲು ಅನುಮತಿ ನೀಡಲಾಗಿದ್ದು, ಮುಂಗಾರು ಹಂಗಾಮಿನ ಚಟುವಟಿಕೆಗಳು ಅವ್ಯಾಹತವಾಗಿ ನಡೆದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೃಷಿ ಕ್ಷೇತ್ರದ ಸಮಸ್ಯೆಗಳ ಕುರಿತು ರೈತ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಇತಿಮಿತಿಯಲ್ಲಿ ರೈತರಿಗೆ ಎಲ್ಲ ರೀತಿಯಲ್ಲೂ ಬೆಂಬಲ ನೀಡಲಾಗುವುದು ಮತ್ತು ಶೀಘ್ರದಲ್ಲೇ ಸರಕಾರದ ನಿಲುವನ್ನು ಸ್ಪಷ್ಟಪಡಿಸಲಾಗುವುದು ಎಂದರು.

ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕೃಷಿ ಇಲಾಖೆ ಕಚೇರಿಗಳು, ರೈತ ಸಂಪರ್ಕ ಕೇಂದ್ರಗಳು ಹಾಗೂ ಬಾಡಿಗೆ ಆಧಾರಿತ ಯಂತ್ರೋಪಕರಣಗಳ ಸೇವಾ ಕೇಂದ್ರಗಳು, ಕೃಷಿ ಪರಿಕರ ಮಾರಾಟ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಹಿಂಗಾರು, ಬೇಸಿಗೆ ಹಂಗಾಮಿನ ಬೆಳೆಗಳ ಕಟಾವು ಕಾರ್ಯ ಪ್ರಗತಿಯಲ್ಲಿದ್ದು, ಶೇ.80ರಷ್ಟು ಕಟಾವು ಪೂರ್ಣಗೊಂಡಿದೆ. ಇದಕ್ಕೆ ಬೇರೆ ರಾಜ್ಯಗಳಿಂದ ಕಟಾವು ಯಂತ್ರಗಳನ್ನು ತರಿಸಲು ವ್ಯವಸ್ಥೆ ಮಾಡಲಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸಲು ಅಗ್ರಿ ವಾರ್ ರೂಂ ಸ್ಥಾಪಿಸಲಾಗಿದೆ. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಲಭ್ಯವಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬೆಳೆಯುವ ಹೂವು, ಹಣ್ಣು, ತರಕಾರಿಗಳನ್ನು ಇತರ ರಾಜ್ಯಗಳಿಗೆ ಸಾಗಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಪ್‍ಕಾಮ್ಸ್ ಮೂಲಕ ಹಣ್ಣು, ತರಕಾರಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ರೈತ ಉತ್ಪಾದನಾ ಸಂಸ್ಥೆಗಳ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ರಾಯಚೂರು, ಕೊಪ್ಪಳ, ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ಇತ್ತೀಚೆಗೆ ಅಕಾಲಿಕ ಮಳೆಯಿಂದ ನಾಶವಾಗಿರುವ ಭತ್ತದ ಬೆಳೆಗೆ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ. ಕೇಂದ್ರ ಸರಕಾರದ ಪಿಎಂ-ಕಿಸಾನ್ ಯೋಜನೆಯಡಿ ವಿವಿಧ ಕಂತುಗಳಲ್ಲಿ 50.77 ಲಕ್ಷ ರೈತರಿಗೆ ಒಟ್ಟು 3,755.16 ಕೋಟಿ ರೂ.ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ಹೇಳಿದರು.

2020-21ನೆ ಸಾಲಿನಲ್ಲಿ 47.81 ಲಕ್ಷ ರೈತರಿಗೆ ಎರಡು ಸಾವಿರ ರೂ.ಗಳಂತೆ ಒಟ್ಟು 956.32 ಕೋಟಿ ರೂ.ವರ್ಗಾಯಿಸಲಾಗಿದೆ. ರಾಜ್ಯ ಸರಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೆ 44.67 ಲಕ್ಷ ರೈತರಿಗೆ 893.95 ಕೋಟಿ ರೂ.ಆರ್ಥಿಕ ನೆರವು ಒದಗಿಸಲಾಗಿದೆ. ಮೆಕ್ಕೆ ಜೋಳ ಖರೀದಿಗೆ ಕೆಎಂಎಫ್‍ಗೆ ಸೂಚಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಸಭೆಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್, ತೋಟಗಾರಿಕೆ ಸಚಿವ ನಾರಾಯಣಗೌಡ, ಕಂದಾಯ ಸಚಿವ ಆರ್.ಅಶೋಕ್ ಮತ್ತು ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News