ವಿದೇಶಗಳಿಂದ ಬರುವ ಕನ್ನಡಿಗರಿಗೆ ಸ್ಟಾರ್ ಹೊಟೇಲ್‍ಗಳಲ್ಲಿ ಕ್ವಾರಂಟೈನ್: ಬಿಬಿಎಂಪಿ ಸಮ್ಮತಿ

Update: 2020-05-07 17:01 GMT

ಬೆಂಗಳೂರು, ಮೇ 7: ವಿದೇಶದಿಂದ ರಾಜ್ಯಕ್ಕೆ ಆಗಮಿಸಲಿರುವ ಸುಮಾರು 7 ಸಾವಿರ ಕನ್ನಡಿಗರಿಗೆ, ಅವರು ಇಚ್ಛಿಸುವ ಸ್ಟಾರ್ ಹೊಟೇಲ್‍ಗಳಲ್ಲಿ ಕ್ವಾರಂಟೈನ್‍ನಲ್ಲಿರಲು ಬಿಬಿಎಂಪಿ ಸಮ್ಮತಿಸಿದೆ.

ಕೊರೋನ ಭೀತಿ ಹಿನ್ನೆಲೆ ವಿದೇಶದಿಂದ ಬರುವವರು ಕ್ವಾರಂಟೈನ್‍ನಲ್ಲಿರಲು ಫೈವ್ ಸ್ಟಾರ್, ತ್ರಿ ಸ್ಟಾರ್ ಹೊಟೇಲ್‍ಗಳನ್ನು ಆರಿಸಿಕೊಳ್ಳಬಹುದಾಗಿದೆ. ಆದರೆ, ಅದರ ಬಾಡಿಗೆಯನ್ನು ಅವರೇ ಪಾವತಿಸಬೇಕಾಗಿದೆ.

ವಿದೇಶದಲ್ಲಿರುವ 7 ಸಾವಿರ ಮಂದಿಯನ್ನು ಏರ್ ಲಿಫ್ಟ್ ಮಾಡಲು ತೀರ್ಮಾನಿಸಲಾಗಿದ್ದು, ಮೇ 8ರಂದು ಆಗಮಿಸಲಿರುವ ವಿಮಾನದಲ್ಲಿ ಸುಮಾರು 300 ಕನ್ನಡಿಗರು ರಾಜ್ಯಕ್ಕೆ ಬಂದಿಳಿಯಲಿದ್ದಾರೆ. ರಾಜ್ಯಕ್ಕೆ ಬರುವವರು 14 ದಿನ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ. ಹೀಗಾಗಿ ಅವರಿಗೆ ತ್ರಿ ಸ್ಟಾರ್, ಫೈವ್ ಸ್ಟಾರ್ ಹೊಟೇಲ್ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಸ್ಟಾರ್ ಹೊಟೇಲ್‍ಗಳ ಕ್ವಾರಂಟೈನ್ ಅವಧಿಯ ದರ ನಿಗದಿ ಮಾಡಲಾಗಿದ್ದು, ವಿದೇಶದಿಂದ ಆಗಮಿಸುವವರು ತಾವು ಇಚ್ಛಿಸುವ ಹೊಟೇಲ್‍ನಲ್ಲಿ ಕ್ವಾರಂಟೈನ್ ನಲ್ಲಿ ಇರಬಹುದು.

ಕ್ವಾರಂಟೈನ್ ಕ್ಯಾಂಪಸ್‍ಗೆ ಒಳಪಡುವ ಹೊಟೇಲ್‍ಗಳ ಸೂಕ್ತತೆಯನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಪರಶೀಲಿಸಿ ದೃಢೀಕರಿಸಬೇಕು. ಹೊಟೇಲ್ ಹಾಗೂ ಅವರ ಉದ್ಯೋಗಿಗಳನ್ನು ಸುರಕ್ಷಿತವಾಗಿರಿಸಲು ಮಾಸ್ಕ್ ಹಾಗೂ ನೈರ್ಮಲ್ಯೀಕರಣದ ಸೇವೆಗಳು ಒಳಗೊಂಡಂತೆ ರಕ್ಷಣಾತ್ಮಕ ಸಾಧನಗಳನ್ನು ಒದಗಿಸಬೇಕು. ಒಂದು ವೇಳೆ ಸೋಂಕಿತರು ಹೆಚ್ಚಾದಲ್ಲಿ ಸರಕಾರಿ ಕಟ್ಟಡಗಳಲ್ಲಿ ಜಾಗ ಲಭ್ಯವಿರುವುದನ್ನು ಕಡ್ಡಾಯವಾಗಿ ಖಚಿತಪಡಿಸಿಕೊಂಡು ನಂತರವೇ ಸಾಮೂಹಿಕವಾಗಿ ಕ್ವಾರಂಟೈನ್‍ಗಳಿಗೆ ಸೇವೆ ಪಡೆಯತಕ್ಕದ್ದು ಎಂದು ಸರಕಾರ ಸೂಚಿಸಿದೆ.

ದರ ನಿಗದಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಹೋಟೆಲ್‍ಗಳಿಗೆ 1200 ರೂ., ಮುನ್ಸಿಪಲ್ ಕಾರ್ಪೋರೇಶನ್ ವ್ಯಾಪ್ತಿಗೆ ಬರುವ ಹೋಟೆಲ್‍ಗಳಿಗೆ 900 ರೂ., ಪುರಸಭೆ ವ್ಯಾಪ್ತಿಯನ್ನು ಒಳಗೊಂಡ ರಾಜ್ಯದ ಇತರೆ ಪ್ರದೇಶಗಳಲ್ಲಿರುವ ಹೋಟೆಲ್‍ಗಳಿಗೆ 750 ರೂ. ದರ ನಿಗದಿ ಮಾಡಲಾಗಿದ್ದು, ಈ ದರದಲ್ಲಿ ಊಟದ ವ್ಯವಸ್ಥೆ ಒಳಗೊಂಡಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News