ಲಾಕ್‍ಡೌನ್ ನಿಂದ ಸಂಕಷ್ಟದಲ್ಲಿರುವ ರೈತರ ಸಮಸ್ಯೆ ನಿವಾರಿಸಿ: ಸರಕಾರಕ್ಕೆ ಹೈಕೋರ್ಟ್ ಸೂಚನೆ
ಬೆಂಗಳೂರು, ಮೇ 7: ರಾಜ್ಯದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರ ಸಮಸ್ಯೆಯನ್ನು ನಿವಾರಿಸಬೇಕೆಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಸೂಚನೆ ನೀಡಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ಸಭೆ ಮಾಡಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಗಳನ್ನು ನಡೆಸಬೇಕು ಹಾಗೂ ರೈತರ ಸಮಸ್ಯೆಯನ್ನು ನಿವಾರಿಸಬೇಕೆಂದು ನ್ಯಾಯಪೀಠವು ಸರಕಾರಕ್ಕೆ ಸೂಚನೆ ನೀಡಿತು.
ಜಿಲ್ಲಾಧಿಕಾರಿ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಸ್ಥಳೀಯ ರೈತ ಪ್ರತಿನಿಧಿಗಳು ಮತ್ತು ರೈತ ಸಂಘಟನೆ ಮುಖ್ಯಸ್ಥರ ಸಭೆ ಕರೆದು, ರೈತರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ತಕ್ಷಣ ಈ ಸಭೆಗಳನ್ನು ಆಯೋಜಿಸುವುದನ್ನು ಖಾತರಿಪಡಿಸಬೇಕು. ಆಯೋಜನೆ ಮಾಡಿದ್ದ ಬಗ್ಗೆ ನ್ಯಾಯಪೀಠಕ್ಕೆ ತಿಳಿಸಬೇಕೆಂದು ನಿರ್ದೇಶನ ನೀಡಿದ್ದಾರೆ.
ಸರಕಾರದ ಪರ ವಾದಿಸಿದ ವಕೀಲರು, ಲಾಕ್‍ಡೌನ್ ಅವಧಿಯಲ್ಲಿ ಕೃಷಿ ಚಟುವಟಿಕೆ ನಡೆಸಲು ಹಾಗೂ ರೈತರಿಗೆ ಅಗತ್ಯ ನೆರವು ನೀಡಲು ರಾಜ್ಯ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ರಚಿಸಲಾಗಿದೆ. ಅದಕ್ಕಾಗಿ ತಜ್ಞರ ನೇತೃತ್ವದಲ್ಲಿ ಅಗ್ರಿ ವಾರ್ ರೂಂ ತೆರೆಯಲಾಗಿದೆ. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯ ಜಿಲ್ಲಾ ಮಟ್ಟದ ಸಹಾಯವಾಣಿ ಕೂಡ ಇದೆ. ರೈತರ ಸಹಾಯಕ್ಕೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ತಾಲೂಕು ಮಟ್ಟದ ಕಚೇರಿಗಳಲ್ಲಿ 132 ಸಂಖ್ಯೆ ಕಾಲ್ ಸೆಂಟರ್ ಇದ್ದು, 742 ಹೋಬಳಿಗಳಲ್ಲಿ ರೈತ ಸಂಪರ್ಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಕೊಯ್ಲು ಮತ್ತು ಬಿತ್ತನೆಗೆ ಸಂಬಂಧಿಸಿದಂತೆ 542 ಗ್ರಾಹಕ ಖರೀದಿ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎಂದು ಪೀಠಕ್ಕೆ ಮಾಹಿತಿ ನೀಡಿದರು. ಇದನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಿ, ವಿಚಾರಣೆ ಮುಂದೂಡಿತು.