ವಲಸೆ ಕಾರ್ಮಿಕರು, ಅನಿವಾಸಿ ಕನ್ನಡಿಗರ ನೆರವಿಗೆ ರಾಜ್ಯ ಸರಕಾರ ಧಾವಿಸಲಿ: ಪಾಪ್ಯುಲರ್ ಫ್ರಂಟ್

Update: 2020-05-07 17:42 GMT

ಬೆಂಗಳೂರು: ವಲಸೆ ಕಾರ್ಮಿಕರಿಗೆ ವ್ಯವಸ್ಥೆಗೊಳಿಸಲಾಗಿದ್ದ ವಿಶೇಷ ರೈಲನ್ನು ರದ್ದುಪಡಿಸಿರುವ ರಾಜ್ಯ ಸರಕಾರದ ಕ್ರಮವು ಅಮಾನವೀಯ ಮತ್ತು ಇದು ಕಾರ್ಮಿಕರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಹೇಳಿದ್ದಾರೆ.

ರಾಜ್ಯದ ಪ್ರಮುಖ ಬಿಲ್ಡರುಗಳು ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗಳೊಂದಿಗೆ ನಡೆಸಿದ ಸಭೆಯ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಮನುಷ್ಯ ವಿರೋಧಿ ನಿರ್ಧಾರವನ್ನು ಪ್ರಕಟಿಸಿದ್ದಾರೆ. 40 ದಿನಗಳ ಸುದೀರ್ಘ ಲಾಕ್‌ಡೌನ್ ನಿಂದಾಗಿ ವಲಸೆ ಕಾರ್ಮಿಕರು ಈಗಾಗಲೇ ಅತಂತ್ರರಾಗಿದ್ದಾರೆ. ಹೊಟ್ಟೆಪಾಡಿಗೂ ತೀವ್ರ ಯಾತನೆ ಅನುಭವಿಸಿದ ಪರಿಸ್ಥಿತಿ ಈ ಕಾರ್ಮಿಕರದ್ದು. ಆದರೆ‌ ಕೇವಲ ರಿಯಲ್ ಎಸ್ಟೇಟ್ ಮತ್ತು ಬಿಲ್ಡರ್ ಗಳ ಹಿತಾಸಕ್ತಿಯನ್ನು ಕಾಪಾಡಲು ರಾಜ್ಯ ಸರಕಾರವು ಕಾರ್ಮಿಕರ ಹಿತವನ್ನು ಸ್ಪಷ್ಟವಾಗಿ ಕಡೆಗಣಿಸಿದೆ. ಇಂತಹ ಮಾನವೀಯ ಬಿಕ್ಕಟ್ಟಿನ ನಡುವೆಯೂ ಕಾರ್ಮಿಕರನ್ನು ಶೋಷಿಸುತ್ತಿರುವ ಸರಕಾರದ ನಡೆ ಕಾನೂನು ವಿರೋಧಿಯೂ ಆಗಿರುತ್ತದೆ.

ರಾಜ್ಯ ಸರಕಾರವು ಉಳ್ಳವರ ಹಿತ ಕಾಯುವ ಬದಲು, ದಿಕ್ಕಾಪಾಲಾಗಿರುವ ಕಾರ್ಮಿಕರ‌ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದು ಕಾರ್ಮಿಕ ವಿರೋಧಿ ಧೋರಣೆಯನ್ನು ಕೈಬಿಟ್ಟು ರೈಲು ರದ್ದುಗೊಳಿಸಿದ ತನ್ನ ಘೋರ‌ ಪ್ರಮಾದವನ್ನು ತಿದ್ದಿಕೊಳ್ಳಬೇಕು. ಕೂಡಲೇ ವಿಶೇಷ ರೈಲನ್ನು ವ್ಯವಸ್ಥೆಗೊಳಿಸಿ ಹೊರ ರಾಜ್ಯ ವಲಸೆ‌ ಕಾರ್ಮಿಕರಿಗೆ ತಮ್ಮ ಊರಿಗೆ ಮರಳಲು ಅವಕಾಶ ಮಾಡಿಕೊಡಬೇಕೆಂದು ಎ.ಕೆ.ಅಶ್ರಫ್ ಒತ್ತಾಯಿಸಿದ್ದಾರೆ.

ಅದೇ ರೀತಿ ಕೊಲ್ಲಿ ರಾಷ್ಟ್ರಗಳಲ್ಲೂ ಲಕ್ಷಾಂತರ ಅನಿವಾಸಿ ಕನ್ನಡಿಗರು ಅತಂತ್ರರಾಗಿದ್ದಾರೆ. ಅನಿವಾಸಿಗಳನ್ನು ಕರೆ ತರಲು ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂಬ ಸುದ್ದಿ ಇದ್ದರೂ, ಅದರಲ್ಲಿ ಬಹಳಷ್ಟು ಗೊಂದಲಗಳು ಎದ್ದು ಕಾಣುತ್ತಿವೆ. ಮೊದಲಿಗೆ ಬಿಡುಗಡೆಗೊಳಿಸಲಾದ ಪಟ್ಟಿಯಲ್ಲಿ ಕೊಲ್ಲಿ ರಾಷ್ಟ್ರಗಳಿಂದ ರಾಜ್ಯಕ್ಕೆ ನೇರ ವಿಮಾನ ವ್ಯವಸ್ಥೆಯೇ ಇರಲಿಲ್ಲ. ಈಗ ಅನಿವಾಸಿಗರನ್ನು ರಾಜ್ಯಕ್ಕೆ ಕರೆ ತರುವ ಮಾಹಿತಿ ನೀಡಲಾಗಿದ್ದರೂ, ಅದರ ವೇಳಾಪಟ್ಟಿಯೂ ಸ್ಪಷ್ಟವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಈ ಗೊಂದಲವನ್ನು ನಿವಾರಿಸಿ, ಅನಿವಾಸಿ ಕನ್ನಡಿಗರ ಆತಂಕವನ್ನು ದೂರಮಾಡಬೇಕು. ರಾಜ್ಯ ಸರಕಾರವು ಕೊಲ್ಲಿ ರಾಷ್ಟ್ರಗಳಿಂದ ರಾಜ್ಯಕ್ಕೆ ಅನಿವಾಸಿಗರನ್ನು ಕರೆ ತರುವ ವಿಮಾನದ ವೇಳಾಪಟ್ಟಿಯನ್ನು ಕೂಡಲೇ ಬಿಡುಗಡೆಗೊಳಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕೆಂದು ಎ.ಕೆ.ಅಶ್ರಫ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News