ಕಾರ್ಮಿಕರಿಗೆ ಉದ್ಯೋಗ ದೊರಕಿಸುವುದು ನಮ್ಮ ಆದ್ಯತೆ: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-05-08 12:15 GMT

ಬೆಂಗಳೂರು, ಮೇ 8: ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಕಾರ್ಮಿಕರಿಗೆ ಉದ್ಯೋಗ ದೊರಕಿಸುವುದು ನಮ್ಮ ಆದ್ಯತೆ. ಸರಕಾರದ ಇತಿಮಿತಿಯಲ್ಲಿ ಜನರ ಸಂಕಷ್ಟಕ್ಕೆ ಅತ್ಯಂತ ಮಾನವೀಯತೆಯಿಂದ ಸ್ಪಂದಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ಶುಕ್ರವಾರ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿದ್ದರಾಮಯ್ಯ ನೇತೃತ್ವದ ನಿಯೋಗದೊಂದಿಗೆ ಸಮಾಲೋಚನೆ ಬಳಿಕ ಮಾತನಾಡಿದ ಅವರು, ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ಸಮುದಾಯಗಳ ಮಾಹಿತಿ ನನಗಿದೆ. ಇವರಿಗೂ ನೆರವು ನೀಡುವ ಕುರಿತು ಮುಂದಿನ ದಿನಗಳಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಅಭಯ ನೀಡಿದರು.

ಲಾಕ್‍ಡೌನ್‍ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗಾಗಿ 1,610 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಹೂ ಬೆಳೆಗಾರರು, ಹಣ್ಣು ಮತ್ತು ತರಕಾರಿ ಬೆಳೆಗಾರರು, ನೇಕಾರರು, ದೋಬಿ, ಕ್ಷೌರಿಕರು, ಕಟ್ಟಡ ಕಾರ್ಮಿಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ನೆರವು ಘೋಷಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಕೃಷಿ ಸಚಿವರು ಎಲ್ಲ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಿ ವಸ್ತುಸ್ಥಿತಿ ಅರಿತಿದ್ದಾರೆ. ಬೇಸಿಗೆ ಬೆಳೆ ಕಟಾವಿಗೆ ಅಗತ್ಯ ಯಂತ್ರೋಪಕರಣಗಳನ್ನು ಹೊರ ರಾಜ್ಯಗಳಿಂದ ತರಿಸಿ ಅನುಕೂಲ ಕಲ್ಪಿಸಲಾಗಿದೆ. ಮುಂಗಾರು ಹಂಗಾಮಿಗೆ ಬಿತ್ತನೆಬೀಜ, ರಸಗೊಬ್ಬರ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿರುವುದನ್ನು ಖಾತರಿಪಡಿಸಿಕೊಳ್ಳಲಾಗಿದೆ ಎಂದು ಯಡಿಯೂರಪ್ಪ ವಿವರ ನೀಡಿದರು.

ಕೃಷಿ ಚಟುವಟಿಕೆಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿತ್ತು. ಆಹಾರ ಮತ್ತು ಇತರೆ ಅಗತ್ಯ ವಸ್ತುಗಳ ಸರಬರಾಜು ಸರಪಳಿ ನಿರ್ವಹಣೆಗಾಗಿ ಟಾಸ್ಕ್ ಫೋರ್ಸ್ ರಚನೆ, ಅಗ್ರಿ ವಾರ್ ರೂಂ ಸ್ಥಾಪನೆ ಮೂಲಕ ಕೃಷಿ ಚಟುವಟಿಕೆಗಳನ್ನು ಹೆಚ್ಚಿನ ರೀತಿಯಲ್ಲಿ ನಡೆಸಲು ಕ್ರಮ ವಹಿಸಲಾಗಿದೆ ಎಂದು ಬಿಎಸ್‍ವೈ ಹೇಳಿದರು.

ಮೇ 3ರ ನಂತರ ಕೇಂದ್ರದ ಮಾರ್ಗಸೂಚಿಯನ್ವಯ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ರೈತ ಮುಖಂಡರು, ಕೈಗಾರಿಕೋದ್ಯಮಿಗಳು, ಬಿಲ್ಡರ್ ಗಳು, ಹೊಟೇಲ್ ಮಾಲಕರು ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಅವರ ಸಲಹೆಗಳನ್ನು ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಪರಿಸ್ಥಿತಿ ನಿಯಂತ್ರಣದಲ್ಲಿದೆ

ಇತರೆ ರಾಜ್ಯಗಳಿಗೆ ಹೋಲಿಸಿದರೆ, ರಾಜ್ಯದಲ್ಲಿ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮಾರಕ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ರಾಜ್ಯ ಸರಕಾರದೊಂದಿಗೆ ಎಲ್ಲರೂ ಕೈಜೋಡಿಸಬೇಕು

-ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News