ಮೇ 9ರಿಂದ ಆಂಗ್ಲ ಮಾಧ್ಯಮದಲ್ಲೂ ಎಸೆಸೆಲ್ಸಿ ಪುನರ್ ಮನನ ತರಗತಿ: ಸಚಿವ ಸುರೇಶ್ ಕುಮಾರ್

Update: 2020-05-08 16:20 GMT

ಬೆಂಗಳೂರು, ಮೇ 8: ದೂರದರ್ಶನದ ಚಂದನ ವಾಹಿನಿಯಲ್ಲಿ ಎ.29ರಿಂದ ಆರಂಭಿಸಲಾಗಿರುವ ಎಸೆಸೆಲ್ಸಿ ಪುನರ್ ಮನನ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿಯೂ ಮೇ 9ರಿಂದ ಪ್ರಾರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕನ್ನಡ ಮಾಧ್ಯಮದಲ್ಲಿ ಆರಂಭಿಸಲಾಗಿರುವ ಪುನರ್‍ಮನನ ತರಗತಿಗಳನ್ನು ರಾಜ್ಯದ ವಿದ್ಯಾರ್ಥಿ ಸಮೂಹ ಬೃಹತ್ ಮಟ್ಟದಲ್ಲಿ ಸದುಪಯೋಗಪಡಿಸಿಕೊಳ್ಳುತ್ತಿದ್ದು, ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳಿಗೂ ಉಪಯೋಗವಾಗುವಂತೆ ಪುನರ್ ಮನನ ತರಗತಿಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ 30 ದಿನಗಳ ಅವಧಿಯಲ್ಲಿ ಮೊದಲ 16 ದಿನ ಗಣಿತ ಹಾಗೂ ವಿಜ್ಞಾನ, ನಂತರದ 10 ದಿನ ಸಮಾಜ ವಿಜ್ಞಾನ ತರಗತಿಗಳನ್ನು ಆಂಗ್ಲ ಮಾಧ್ಯಮದಲ್ಲಿ ಬೋಧಿಸಲಾಗುತ್ತಿದೆ. ಸಮಾಜ ವಿಜ್ಞಾನ ಬೋಧನೆ ಪೂರ್ಣಗೊಂಡ ಬಳಿಕ 6 ದಿನಗಳ ಕಾಲ ಹಿಂದಿ, ಸಂಸ್ಕೃತ ಹಾಗೂ ಉರ್ದು ಮೊದಲ ಭಾಷೆಗಳ ತರಗತಿಗಳನ್ನು ಬೋಧಿಸಲಾಗುವುದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಮೇ 9ರಿಂದ ಪ್ರತಿದಿನ ಬೆಳಗ್ಗೆ 9.30 ರಿಂದ 11 ಗಂಟೆವರೆಗೆ ಚಂದನ ವಾಹಿನಿಯಲ್ಲಿ ಈ ತರಗತಿಗಳು ಪ್ರಸಾರವಾಗುವುದಿದ್ದು, ಈ ತರಗತಿಗಳ ಮುದ್ರಿತ ಭಾಗವನ್ನು ಮಕ್ಕಳ ವಾಣಿ ಯೂ-ಟ್ಯೂಬ್ ವಾಹಿನಿಯಲ್ಲೂ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ.

1.20 ಲಕ್ಷಕ್ಕೂ ಹೆಚ್ಚು ಜನರಿಂದ ಇ-ಸಾರ್ವಜನಿಕ ಆ್ಯಪ್ ಬಳಕೆ: ಕಳೆದ ನಾಲ್ಕು ತಿಂಗಳ ಹಿಂದೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಲೋಕಾರ್ಪಣೆಗೊಳಿಸಿದ ಇ-ಸಾರ್ವಜನಿಕ ಗ್ರಂಥಾಲಯ ಆ್ಯಪ್ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು, 1.20 ಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್ ಅನ್ನು ಡೌನ್‍ಲೋಡ್ ಮಾಡಿ ಬಳಸುತ್ತಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಸೃಷ್ಟಿಯಾದ ಸಾಮಾಜಿಕ ಸ್ಥಿತಿಗತಿ ಹಿನ್ನೆಲೆಯಲ್ಲಿ ಅತ್ಯಂತ ಸಮಯೋಚಿತವಾಗಿ ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ ಇಂತಹ ಉತ್ತಮ ಉಪಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಹೆಚ್ಚಿನ ಸದುಪಯೋಗವಾಗಿದೆ. ಈ ಸಂದರ್ಭದಲ್ಲಿ ಬೃಹತ್ ಸಂಖ್ಯೆಯ ಚಂದಾದಾರರು ಈ ಡಿಜಿಟಲ್ ಗ್ರಂಥಾಲಯದ ಅನುಕೂಲ ಪಡೆದುಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News