×
Ad

ರಾಜ್ಯದಲ್ಲಿ 98,081 ಮಾದರಿಗಳ ಪೈಕಿ 753 ಪಾಸಿಟಿವ್: ಸಚಿವ ಸುರೇಶ್‍ ಕುಮಾರ್

Update: 2020-05-08 20:08 IST

ಬೆಂಗಳೂರು, ಮೇ 8: ರಾಜ್ಯದಲ್ಲಿ ಇದುವರೆಗೆ ಒಟ್ಟಾರೆ 753 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಇಂದು ಸಂಜೆ 5ರ ಮಾಹಿತಿಯಂತೆ ಒಟ್ಟಾರೆ 31 ಜನ ಸಾವನ್ನಪ್ಪಿದ್ದು, 376 ಜನ ಗುಣಮುಖರಾಗಿ ಹಿಂತಿರುಗಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ಕೊರೋನ ಸ್ಥಿತಿಗತಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಉಳಿದ ಪ್ರಕರಣಗಳಲ್ಲಿ 340 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ. 6 ಜನರನ್ನು ತೀವ್ರ ನಿಗಾ ಘಟಕಗಳಲ್ಲಿ ಇರಿಸಲಾಗಿದೆ. ನಿನ್ನೆ ಸಂಜೆ 5ಕ್ಕೆ ಹೋಲಿಸಿದಲ್ಲಿ ಇಂದು ಒಟ್ಟಾರೆ 48 ಹೊಸ ಪ್ರಕರಣಗಳು ಸೇರ್ಪಡೆಯಾಗಿವೆ ಎಂದರು.

ಈ ಪ್ರಕರಣಗಳಲ್ಲಿ ದಾವಣಗೆರೆ-14, ಬೆಂಗಳೂರು-7, ಬೆಳಗಾವಿ-11, ಉತ್ತರ ಕನ್ನಡದಿಂದ 12 ಪ್ರಕರಣಗಳು ವರದಿಯಾಗಿವೆ. ಜಿಲ್ಲಾಡಳಿತಗಳು ಪ್ರಕರಣಗಳ ಬಗ್ಗೆ ತೀವ್ರ ನಿಗಾ ವಹಿಸಿ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಿವೆ ಎಂದು ಸುರೇಶ್ ಕುಮಾರ್ ಹೇಳಿದರು.

ರಾಜ್ಯಾದ್ಯಂತ ಒಟ್ಟು 25,865 ವ್ಯಕ್ತಿಗಳನ್ನು ನಿಗಾವಣೆಯಲ್ಲಿಡಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಪರೀಕ್ಷಿಸಲಾಗಿರುವ 98,081 ಮಾದರಿಗಳ ಪೈಕಿ 753 ಮಾದರಿಗಳು ಖಚಿತಗೊಂಡಿವೆ. ಇಂದು 4,546 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಅವರು ತಿಳಿಸಿದರು.

ಕೋವಿಡ್ ಸೋಂಕಿನ ಅಂಕಿ ಅಂಶಗಳಲ್ಲಿ ಮಾರ್ಚ್‍ನಲ್ಲಿ ಮೂರನೆ ಸ್ಥಾನದಲ್ಲಿದ್ದ ಕರ್ನಾಟಕ ಇಂದು 13ನೆ ಸ್ಥಾನದಲ್ಲಿದೆ. ಶೇ.5.97 ರಾಷ್ಟ್ರೀಯ ಸರಾಸರಿಗೆ ಹೋಲಿಸಿದಲ್ಲಿ ರಾಜ್ಯದ ಸರಾಸರಿ ಶೇ.3.13 ಇದೆ. ವಿದೇಶಗಳಿಂದ ಕರ್ನಾಟಕಕ್ಕೆ ಆಗಮಿಸುವ ಅಂತರ್‍ರಾಷ್ಟ್ರೀಯ ಪ್ರಯಾಣಿಕರಿಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ನಿರ್ದೇಶನದಂತೆ ಪರಿಷ್ಕೃತ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ ಎಂದು ಅವರು ಹೇಳಿದರು.

ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಹಿರಿಯ ತಜ್ಞ ವೈದ್ಯರು, ವೈದ್ಯ ಬೋಧಕರು ಕಡ್ಡಾಯವಾಗಿ ಕೋವಿಡ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ನಿರ್ದೇಶನ ಹೊರಡಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು, ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಈ ಕುರಿತು ಸಂಪೂರ್ಣ ಜವಾಬ್ದಾರಿ ಹೊರಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News