ಬೆಂಗಳೂರು: 9 ತಿಂಗಳ ಗರ್ಭಿಣಿ, ಕ್ವಾರಂಟೈನ್ ಅವಧಿ ಮುಗಿಸಿದ ಇಬ್ಬರಿಗೆ ಕೊರೋನ ದೃಢ
ಬೆಂಗಳೂರು, ಮೇ 8: ಪಾದರಾಯನಪುರದ 9 ತಿಂಗಳ ತುಂಬು ಗರ್ಭಿಣಿ ಸೇರಿದಂತೆ ಹೊಂಗಸಂದ್ರದಲ್ಲಿ ಕ್ವಾರಂಟೈನ್ ಅವಧಿ ಮುಗಿಸಿದ ಇಬ್ಬರಿಗೆ ಕೊರೋನ ವೈರಸ್ ಸೋಂಕು ಇರುವುದು ಪತ್ತೆಯಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಪಾದರಾಯನಪುರ ವಾರ್ಡ್‍ನ 34 ವರ್ಷದ 9 ತಿಂಗಳ ಗರ್ಭಿಣಿಗೆ ರ‍್ಯಾಂಡಮ್ ಪರೀಕ್ಷೆ ನಡೆಸಿದ ವೇಳೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ. ಕೂಡಲೇ ಗರ್ಭಿಣಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಕೊರೋನ ಚಿಕಿತ್ಸೆಯ ಜೊತೆಗೆ ಹೆರಿಗೆ ಸಮಯ ಆಗಿರುವುದರಿಂದ ಮಗುವಿಗೂ ಕೊರೋನ ಹರಡದಂತೆ ಎಚ್ಚರ ವಹಿಸಲಾಗಿದೆ. ಇಲ್ಲಿಯವರಿಗೆ ಪಾದರಾಯನಪುರದ ಕೊರೋನ ಸೋಂಕಿತರ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು, ಗುರುವಾರ ಇಬ್ಬರು ಸೋಂಕಿತರು ಪತ್ತೆಯಾಗಿರುವುದರಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ 12 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ಕ್ವಾರಂಟೈನ್‍ನಲ್ಲಿದ್ದ ಇಬ್ಬರಿಗೆ ಸೋಂಕು: ಹೊಂಗಸಂದ್ರದ ಬಿಹಾರಿ ಕಾರ್ಮಿಕನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಕಾರ್ಮಿಕರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. 419ನೇ ರೋಗಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಈ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿತ್ತು. 14 ದಿನ ಕ್ವಾರಂಟೈನ್ ಮುಗಿದ ಬಳಿಕ ಪರೀಕ್ಷೆ ನಡೆಸಿದಾಗ ಇಬ್ಬರಿಗೂ ಕೊರೋನ ವೈರಸ್ ಸೋಂಕು ಇರುವುದು ದೃಢಪಟ್ಟಿದೆ.
ಪತಿಗೆ ನೆಗಟಿವ್, ಪತ್ನಿಗೆ ಪಾಸಿಟಿವ್: ಪಾದರಾಯನಪುರದ ಗಲಾಟೆಯಲ್ಲಿ ಭಾಗಿಯಾದ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಆತನ 35 ವರ್ಷದ ಪತ್ನಿಗೆ ರ‍್ಯಾಂಡಮ್ ಪರೀಕ್ಷೆ ವೇಳೆ ಕೊರೋನ ಪಾಸಿಟಿವ್ ಬಂದಿದೆ. ಜೈಲಿನಲ್ಲಿರುವ ಪತಿಗೆ ಕೊರೋನ ನೆಗಟಿವ್ ಬಂದಿದೆ.
ನಗರದಲ್ಲಿ ಒಟ್ಟು 167 ಕೊರೋನ ಸೋಂಕಿತರು
ನಗರದಲ್ಲಿ ಇಲ್ಲಿಯವರಿಗೆ 167 ಪ್ರಕರಣ ಪತ್ತೆಯಾಗಿದ್ದು, 76 ಜನರು ಗುಣಮುಖರಾಗಿದ್ದಾರೆ. 7 ಜನರು ಮರಣ ಹೊಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ 31 ಜ್ವರ ಚಿಕಿತ್ಸಾಲಯದಲ್ಲಿ ಒಟ್ಟು 7,004 ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವ ಒಟ್ಟು 1,130 ಜನರು ಹಾಗೂ ಸೆಕೆಂಡರಿ ಸಂಪರ್ಕದಲ್ಲಿರುವ 4,832 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.