ರಾಜ್ಯದಿಂದ ವಿಶೇಷ ರೈಲಿನಲ್ಲಿ ಹೊರಟ 7 ಮಕ್ಕಳು ಸೇರಿ 3,605 ಕಾರ್ಮಿಕರು
ಬೆಂಗಳೂರು, ಮೇ 8: ಲಾಕ್‍ಡೌನ್ ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿಯೇ ಬಂಧಿಯಾಗಿದ್ದ ಹೊರರಾಜ್ಯದ 7 ಮಕ್ಕಳು ಸೇರಿ ಒಟ್ಟು 3,605 ಮಂದಿಯನ್ನು ರಾಜ್ಯ ಸರಕಾರ ಹಾಗೂ ನೈಋತ್ಯ ರೈಲ್ವೆ ಸಹಯೋಗದಲ್ಲಿ ಮೂರು ಶ್ರಮಿಕ್ ವಿಶೇಷ ರೈಲುಗಳಲ್ಲಿ ಅವರ ರಾಜ್ಯಗಳಿಗೆ ಶುಕ್ರವಾರ ಕಳುಹಿಸಲಾಯಿತು.
ಶುಕ್ರವಾರ ಸಂಜೆ 4:25ಕ್ಕೆ ಮೊದಲ ರೈಲು ನಗರದ ಚಿಕ್ಕಬಾಣಾವಾರದಿಂದ 1,200 ಮಂದಿ ಕಾರ್ಮಿಕರನ್ನು ಹೊತ್ತು ಉತ್ತರ ಪ್ರದೇಶದ ಲಕ್ನೋ ಕಡೆಗೆ ಪ್ರಯಾಣ ಬೆಳೆಸಿದರೆ, ಎರಡನೇ ರೈಲು ಸಂಜೆ 5:45ಕ್ಕೆ ಕೋಲಾರದ ಮಾಲೂರು ರೈಲು ನಿಲ್ದಾಣದಿಂದ 1,200 ಕಾರ್ಮಿಕರು ಹಾಗೂ ಏಳು ಮಕ್ಕಳನ್ನು ಬಿಹಾರದ ದಾನಪುರಕ್ಕೆ ಕರೆದೊಯ್ದಿತು.
ಅದೇ ರೀತಿ, ಸಂಜೆ 6:55 ಗಂಟೆ ಸುಮಾರಿಗೆ ಚಿಕ್ಕಬಾಣಾವಾರ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಲಕ್ನೋಗೆ ಹೊರಟ ಮೂರನೇ ರೈಲಿನಲ್ಲಿ 1,198 ಕಾರ್ಮಿಕರು ಪ್ರಯಾಣಿಸಿದರು ಎಂದು ರೈಲ್ವೇ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಆರೋಗ್ಯ ತಪಾಸಣೆ: ಬಿಬಿಎಂಪಿ, ಕಾರ್ಮಿಕ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ನಗರದ ವಿವಿಧೆಡೆ ನೆಲೆಸಿರುವ ವಲಸೆ ಕಾರ್ಮಿಕರನ್ನು ಒಂದೆಡೆ ಸೇರಿಸಿ, ಪ್ರತಿಯೊಬ್ಬರ ಆರೋಗ್ಯ ಪರಿಶೀಲಿಸಿದರು. ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡು ಬಿಎಂಟಿಸಿ ಬಸ್‍ಗಳಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಈ ಎಲ್ಲ ಕಾರ್ಮಿಕರಿಗೂ ಊಟ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ರಾಜಧಾನಿ ಬೆಂಗಳೂರಿನಿಂದ ಇದುವರೆಗೂ 11 ಶ್ರಮಿಕ್ ವಿಶೇಷ ರೈಲುಗಳಲ್ಲಿ ಹೊರರಾಜ್ಯಗಳ ಸುಮಾರು 13,200 ವಲಸೆ ಕಾರ್ಮಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳಲ್ಲಿ ವಲಸೆ ಕಾರ್ಮಿಕರನ್ನು ಹೊರರಾಜ್ಯಗಳಿಗೆ ಕಳಹಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.