ಸಚಿವರಿಗೆ ವಿಶಾಲ ಮನೋಭಾವ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ: ಡಿ.ಕೆ.ಶಿವಕುಮಾರ್
ಬೆಂಗಳೂರು, ಮೇ 8: ನಾವು ನೀಡುವ ಉತ್ತಮ ಸಲಹೆಗಳನ್ನು ಸ್ವೀಕರಿಸುವ ಬದಲು, ತಮ್ಮ ವಿರುದ್ಧವೇ ದಾಳಿ ನಡೆಸುತ್ತಿರುವ ಸಚಿವರಿಗೆ ವಿಶಾಲ ಮನೋಭಾವ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಲಾಕ್‍ಡೌನ್ ಹಿನ್ನೆಲೆಯಲ್ಲಿ ವೃತ್ತಿ ಆಧಾರಿತ ಸಮುದಾಯಗಳು, ರೈತರು, ಕಾರ್ಮಿಕರು, ಉದ್ದಿಮೆದಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರೆದಿದ್ದ ಕಾಂಗ್ರೆಸ್ ಸೇರಿ ನಾನಾ ಪಕ್ಷಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿದ್ದ ಡಿಕೆಶಿ ಅವರು, ಪ್ರತಿಪಕ್ಷವಾಗಿ ನಾವು ನಮ್ಮ ಕರ್ತವ್ಯ ಮಾಡಬಾರದೆ, ಸರಕಾರದ ಅನ್ಯಾಯ, ಅಕ್ರಮಗಳನ್ನು ನೋಡಿಕೊಂಡು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದರು.
ನೀವು ಕೂಡ ಪ್ರತಿಪಕ್ಷದಲ್ಲಿ ಇದ್ದಾಗ ಸರಕಾರದ ತಪ್ಪುಗಳನ್ನು ಎತ್ತಿ ಹಿಡಿಯುತ್ತಿದ್ದೀರಿ. ಪ್ರತಿಭಟನೆಯನ್ನೂ ಮಾಡುತ್ತಿದ್ದೀರಿ. ಆದರೆ, ಈಗ ನಾವು ಅದೇ ಕೆಲಸವನ್ನು ಮಾಡಿದರೆ ನಿಮ್ಮ ಸಚಿವರು ನಮ್ಮ ವಿರುದ್ಧವೇ ಮಾತನಾಡುತ್ತಾರೆ. ವಿಶಾಲ ಮನೋಭಾವ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.
ಅಕ್ಷಯ ಫೌಂಡೇಷನ್ ನೀಡಿದ ಆಹಾರ ಪದಾರ್ಥಗಳ ಮೇಲೆ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ತಮ್ಮ ಹೆಸರು ಹಾಕಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ. ಬಡವರಿಗೆ ಮತ್ತು ಬಾಣಂತಿಯರಿಗೆ ಸೇರಬೇಕಿದ್ದ ಸಕ್ಕರೆ ಇತರೆ ವಸ್ತುಗಳನ್ನು ಮರು ಪ್ಯಾಕಿಂಗ್ ಮಾಡಿದ ಫೋಟೋ ಇನ್ನಿತರ ದಾಖಲೆಗಳನ್ನು ಡಿಕೆಶಿ ಅವರು ಸಭೆಯಲ್ಲಿ ತೋರಿಸಿ, ಇದನ್ನು ಪ್ರಶ್ನೆ ಮಾಡಬಾರದೆ ಎಂದು ಮುಖ್ಯಮಂತ್ರಿಗಳಿಗೆ ಖಾರವಾಗಿ ಕೇಳಿದರು. ಅಲ್ಲದೆ, ನಮ್ಮ ಸಹಕಾರವನ್ನು ನೀವು ದೌರ್ಬಲ್ಯ ಎಂದು ತಿಳಿದುಕೊಳ್ಳಬೇಡಿ ಎಂದು ತಿಳಿಸಿದರು.
ಹೊಸಕೋಟೆಯಲ್ಲಿ ಮಾಜಿ ಸಚಿವರು ಅಧಿಕಾರಿಗಳನ್ನಿಟ್ಟುಕೊಂಡು ಸಭೆ ನಡೆಸಿದ್ದರೂ ಅವರ ವಿರುದ್ಧ ಯಾವುದೇ ಕಾನೂನಿನ ಕ್ರಮ ಕೈಗೊಳ್ಳದ ಬಗ್ಗೆ ಸಿಎಂ ಅವರ ಗಮನಕ್ಕೆ ತಂದಿದ್ದೇವೆ. ನರೇಗಾ ಕಾರ್ಮಿಕರಿಗೆ ಒಂದು ತಿಂಗಳ ವೇತನ ಉಚಿತವಾಗಿ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ಉದ್ದಿಮೆಗಳ 3 ತಿಂಗಳ ಬಡ್ಡಿ ಮನ್ನಾ ಮಾಡಬೇಕು. ಇದಕ್ಕಾಗಿ 50 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ.
-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ