ಲಾಕ್‍ಡೌನ್ ಸಡಿಲಿಕೆ ನಂತರ ಸಂಭವನೀಯ ಸವಾಲುಗಳನ್ನು ಎದುರಿಸಲು ಸಿದ್ಧತೆ: ಸಚಿವ ಡಾ.ಸುಧಾಕರ್

Update: 2020-05-08 17:26 GMT

ಬೆಂಗಳೂರು, ಮೇ 8: ಲಾಕ್‍ಡೌನ್ ಸಡಿಲಿಕೆ ಮತ್ತು ವಿದೇಶಗಳಲ್ಲಿರುವ ಕನ್ನಡಿಗರು ಹಿಂದಿರುಗಿದ ನಂತರ ಎದುರಾಗುವ ಸಂಭವನೀಯ ಸವಾಲುಗಳನ್ನು ಎದುರಿಸಲು ರಾಜ್ಯ ಸರಕಾರ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಶುಕ್ರವಾರ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಆರೋಗ್ಯ ಖಾತೆ ಸಚಿವ ಅಶ್ವಿನ್‍ ಕುಮಾರ್ ಚೌಬೆ ಹಾಗೂ ಸಚಿವಾಲಯದ ಹಿರಿಯ ಅಧಿಕಾರಿಗಳ ಜತೆ ನಡೆದ ವೀಡಿಯೋ ಸಂವಾದದಲ್ಲಿ ರಾಜ್ಯದ ಪರವಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಅವರು, ಕೇಂದ್ರ ಸರಕಾರ ನೀಡಿರುವ ಮಾರ್ಗಸೂಚಿ ಅನ್ವಯ ರಾಜ್ಯದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಾಗಿದೆ ಎಂದರು.

ಮುಂದಿನ ದಿನಗಳಲ್ಲೂ ಕೋವಿಡ್-19 ಸಂಬಂಧ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಕೈಗೊಳ್ಳಬೇಕಿರುವ ಕ್ರಮಗಳನ್ನು ನಿರ್ಧರಿಸಲಾಗಿದೆ. ಈ ಹಿಂದೆ ತಿಳಿಸಿದ್ದಂತೆ ತಂತ್ರಜ್ಞಾನ ಮತ್ತು ತಜ್ಞರ ಹೊಂದಾಣಿಕೆಯ ಮೂಲಕ ಕೊರೋನ ಸೋಂಕಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 4ಟಿ ಸೂತ್ರ ಯಶಸ್ವಿಯಾಗಿದೆ. ಆದರೆ, ಮರಣ ಪ್ರಮಾಣವನ್ನು ಕಡಿಮೆಗೊಳಿಸುವ ಯತ್ನಗಳ ನಡುವೆಯೂ ಮೂವತ್ತು ಮಂದಿ ಸಾವನ್ನಪ್ಪಿರುವುದು ದುರದೃಷ್ಟಕರ ಎಂದು ಅವರು ವಿಷಾದಿಸಿದರು.

ಟೆಲಿ ಮೆಡಿಸಿನ್ ಮತ್ತು ಟೆಲಿ ಐಸಿಯುನಂತಹ ಪರಿಣಾಮಕಾರಿ ಕ್ರಮಗಳ ಮೂಲಕ ಕರ್ನಾಟಕದಲ್ಲಿ ಉನ್ನತ ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ. ಆರಂಭದಲ್ಲಿ ಎರಡು ಲ್ಯಾಬ್‍ಗಳಿಂದ ಕೇವಲ ಮುನ್ನೂರು ಟೆಸ್ಟ್ ಗಳನ್ನು ಮಾತ್ರವೇ ಮಾಡಲು ಸಾಧ್ಯವಾಗಿತ್ತು. ಆದರೆ, ಈಗ ಲ್ಯಾಬ್‍ಗಳ ಸಂಖ್ಯೆ 32 ಹಾಗೂ ಪ್ರತಿದಿನ 5,500 ಟೆಸ್ಟ್ ಗಳನ್ನು ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿದಿನವೂ ಪರಿಸ್ಥಿತಿಯ ಪರಾಮರ್ಶೆ ನಡೆಸುತ್ತಿದ್ದಾರೆ. ಆರೋಗ್ಯ ಸೇತು ಆ್ಯಪ್ ಜತೆಗೆ ಆಪ್ತಮಿತ್ರ ಸಹಾಯವಾಣಿಯನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗಿದೆ. ಈ ಎರಡು ಹೆಚ್ಚು ಉಪಯುಕ್ತವಾಗುತ್ತದೆ. ಲಾಕ್‍ಡೌನ್ ಸಡಿಲಿಕೆ ನಂತರ ಎದುರಾಗಬಹುದಾದ ಪರಿಸ್ಥಿತಿ ನಿಭಾಯಿಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News