ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ: ಕರ್ನಾಟಕಕ್ಕೆ ಉಚಿತ ಆಹಾರ ಧಾನ್ಯಗಳ ಪೂರೈಕೆ
ಬೆಂಗಳೂರು, ಮೇ 8: ರಾಜ್ಯಕ್ಕೆ ಪ್ರಸಕ್ತ ಏಪ್ರಿಲ್‍ನಿಂದ ಜೂನ್ ವರೆಗೆ ಮೂರು ತಿಂಗಳ ಕಾಲ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳಿಗೆ 2.1 ಲಕ್ಷ ಮೆಟ್ರಿಕ್‍ಟನ್ ಆಹಾರಧಾನ್ಯ ನಿಗದಿಪಡಿಸಲಾಗಿದೆ. ಇದನ್ನು 4.01 ಕೋಟಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿನ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ರಾಜ್ಯ ಸರಕಾರ ಈ ಯೋಜನೆಯಡಿ 1,735 ಕೋಟಿ ರೂ. ಮೌಲ್ಯದ 4.45 ಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಮೇ 7 ರವರೆಗೆ ಎತ್ತುವಳಿ ಮಾಡಿದೆ. ಲಾಕ್‍ಡೌನ್ ಆದಾಗಿನಿಂದ ಕರ್ನಾಟಕ 8.03 ಲಕ್ಷ ಮೆಟ್ರಿಕ್ ಟನ್ ತೂಕದ ಆಹಾರ ಧಾನ್ಯಗಳನ್ನು ಸ್ವೀಕರಿಸಿದೆ ಎಂದು ಭಾರತ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್ ದೃಢ ಪಡಿಸಿದ್ದಾರೆ.
ಭಾರತೀಯ ಆಹಾರ ನಿಗಮದ ಕರ್ನಾಟಕ ಪ್ರದೇಶವು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ ಮತ್ತು ಸಾಮಾನ್ಯ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ರಾಜ್ಯದ ಅಗತ್ಯತೆಗಳನ್ನು ಪೂರೈಸಲು ಇದುವರೆಗೆ ಪ್ರತಿದಿನ 7.48 ಲಕ್ಷ ಚೀಲಗಳನ್ನು ಸ್ವೀಕೃತಿ ವಿತರಣೆಯನ್ನು ಮಾಡಿದೆ.
ಇದೇ ಅವಧಿಯಲ್ಲಿ, ಎನ್‍ಎಫ್‍ಎಸ್‍ಎ ಅಡಿಯಲ್ಲಿ ರಾಜ್ಯ ಸರಕಾರವು 2.54 ಎಲ್‍ಎಂಟಿ ಆಹಾರ ಧಾನ್ಯಗಳನ್ನು ಸಹ ಎತ್ತುವಳಿ ಮಾಡಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ವಿತರಣೆಗಾಗಿ ಲಾಕ್‍ಡೌನ್ ಅವಧಿಯಲ್ಲಿ ಕರ್ನಾಟಕಕ್ಕೆ ಕೇಂದ್ರ ಸರಕಾರ ಪೂರೈಸಿದ ಒಟ್ಟು ಆಹಾರ ಧಾನ್ಯಗಳ ಪ್ರಮಾಣ 8.51 ಲಕ್ಷ ಮೆಟ್ರಿಕ್‍ಟನ್. ಇದು ಸುಮಾರು 1.70 ಕೋಟಿ ಚೀಲಗಳ 50 ಕೆಜಿ ಪ್ಯಾಕಿಂಗ್ ಆಗಿದೆ.
ಭಾರತ ಆಹಾರ ನಿಗಮವು ಆಹಾರ ಧಾನ್ಯಗಳ ಖರೀದಿ, ಸಾಗಾಣಿಕೆ ಮತ್ತು ಸಂಗ್ರಹಣೆಯನ್ನು ನಿಕಟವಾಗಿ ಗಮನಿಸುತ್ತಿದೆ. ಜೊತೆಗೆ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಅನ್ನಯೋಜನೆ ಅಡಿಯಲ್ಲಿ ನೀಡಲಾದ ಎಲ್ಲಾ ಆಹಾರ ಧಾನ್ಯಗಳನ್ನು ರಾಜ್ಯ ಸರಕಾರವು ಸಮಯಕ್ಕೆ ಎತ್ತುವಳಿ ಮಾಡುವಂತೆ ನೋಡಿಕೊಳ್ಳುವುದರಿಂದ ರಾಜ್ಯದಲ್ಲಿ ಆಹಾರ ಧಾನ್ಯಗಳ ಸಮರ್ಪಕ ಲಭ್ಯತೆ ಇರುತ್ತದೆ ಹಾಗೂ ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ಯಾರಿಗೂ, ವಿಶೇಷವಾಗಿ ಯಾವುದೇ ಬಡಕುಟುಂಬಕ್ಕೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂಬ ಉದ್ದೇಶವನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರ ಆಹಾರ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಿ.ವಿ.ಪ್ರಸಾದ್ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.