×
Ad

ಹೊರ ಜಿಲ್ಲೆಯವರಿಗೆ ಕ್ವಾರಂಟೈನ್ ಮಾಡದಿರಲು ಶಾಸಕರ ಒತ್ತಾಯ

Update: 2020-05-08 23:06 IST

ಬೆಂಗಳೂರು, ಮೇ 8: ವಿದೇಶಗಳಿಂದ ಬರುವ ಹೊರ ಜಿಲ್ಲೆಯ ಜನರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡದಿರಲು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೆಂಪು ವಲಯದಿಂದ ಬದಲಾಯಿಸುವಂತೆ ಕೋರಿ ಜಿಲ್ಲೆಯ ನಾಲ್ಕು ತಾಲೂಕುಗಳ ಶಾಸಕರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ವತಿಯಿಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ವಿದೇಶಗಳಿಂದ ಕರ್ನಾಟಕದ ಜನರನ್ನು ಕರೆತರುವ ಸರಕಾರದ ಕ್ರಮ ಪ್ರಶಂಸನೀಯವಾದದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ವಿದೇಶದಿಂದ ಬರುವ ಹೊರ ಜಿಲ್ಲೆಯ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಬಾರದು. ಅವರ ಜಿಲ್ಲೆಗಳಿಗೆ ಅವರನ್ನು ಕಳುಹಿಸಿ, ಅಲ್ಲಿಯೆ ಕ್ವಾರಂಟೈನ್ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ರವೀಂದ್ರ, ಶಾಸಕರು ಮಾಡಿರುವ ಮನವಿಯ ಕುರಿತು ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.  ಕೋವಿಡ್-19 ಹಿನ್ನೆಲೆಯಲ್ಲಿ ವಿದೇಶಗಳಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಸೌಲಭ್ಯ ಒದಗಿಸುವ ಹಿನ್ನೆಲೆಯಲ್ಲಿ ಹೆಲ್ಪ್ ಡೆಸ್ಕ್ ಆಗಿ ಕಾರ್ಯನಿರ್ವಹಿಸಲು ತಂಡವನ್ನು ರಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಹೊಸಕೋಟೆ ತಾಲೂಕು ಶಾಸಕ ಶರತ್‍ ಕುಮಾರ್ ಬಚ್ಚೇಗೌಡ, ದೊಡ್ಡಬಳ್ಳಾಪುರ ತಾಲೂಕು ಶಾಸಕ ಟಿ.ವೆಂಕಟರಮಣಯ್ಯ, ದೇವನಹಳ್ಳಿ ತಾಲೂಕು ಶಾಸಕ ನಿಸರ್ಗ ನಾರಾಯಣಸ್ವಾಮಿ, ನೆಲಮಂಗಲ ತಾಲೂಕು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್, ದೊಡ್ಡಬಳ್ಳಾಪುರ ತಾಲೂಕು ಪಂಚಾಯತ್ ಅಧ್ಯಕ್ಷ ಡಿ.ಸಿ.ಶಶಿಧರ್, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News