ರಾಜ್ಯದಲ್ಲಿ ಮತ್ತೆ 36 ಮಂದಿಯಲ್ಲಿ ಕೊರೋನ ಸೋಂಕು: ಒಟ್ಟು ಸಂಖ್ಯೆ 789ಕ್ಕೆ ಏರಿಕೆ
ಬೆಂಗಳೂರು, ಮೇ 9: ರಾಜ್ಯದಲ್ಲಿ ಮತ್ತೆ 36 ಮಂದಿಯಲ್ಲಿ ಹೊಸದಾಗಿ ಕೊರೋನ ವೈರಸ್ ಸೋಂಕು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಶುಕ್ರವಾರ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯ ಅವಧಿಯಲ್ಲಿ 36 ಸೋಂಕು ಪ್ರಕರಣ ಪತ್ತೆಯಾಗಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಬಲೆಟಿನ್ ತಿಳಿಸಿದೆ.
ಬೆಂಗಳೂರು ನಗರದಲ್ಲಿ 12, ಭಟ್ಕಳದಲ್ಲಿ 7, ದಾವಣಗೆರೆಯಲ್ಲಿ 6, ಬಂಟ್ವಾಳ, ಚಿತ್ರದುರ್ಗ ಹಾಗೂ ಬೀದರ್‌ನಲ್ಲಿ ತಲಾ 3, ತುಮಕೂರು, ವಿಜಯಪುರ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ರಾಜ್ಯದ ಒಟ್ಟು ಸೋಂಕಿತರ ಪೈಕಿ 379 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 30 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.
ಭಟ್ಕಳ: 20ಕ್ಕೇರಿದ ಸೋಂಕು ಪ್ರಕರಣ
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರದವರೆಗೆ 12 ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿತ್ತು. ಆದರೆ ಶುಕ್ರವಾರ ಈ ಸಾಲಿಗೆ ಮತ್ತೆ 12 ಮಂದಿ ಒಮ್ಮೆಲೇ ಸೇರ್ಪಡೆಗೊಂಡಿದ್ದರಿಂದ ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿತ್ತು. ಇದೀಗ 7 ಮಂದಿ ಹೊಸದಾಗಿ ಸೇರ್ಪಡೆಯಾವುದರೊಂದಿಗೆ ಎರಡು ದಿನಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 31ಕ್ಕೆ ಏರಿದೆ. ಈ ನಡುವೆ ಭಟ್ಕಳದಲ್ಲಿ ಎರಡು ದಿನಗಳಲ್ಲಿ 19 ಮಂದಿಯಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿರುವುದು ಸ್ಥಳೀಯವಾಗಿ ಆತಂಕಕ್ಕೆ ಕಾರಣವಾಗಿದೆ.