×
Ad

ಬೆಂಗಳೂರು: ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೊರೋನ ಸೋಂಕಿತ ಮಹಿಳೆ

Update: 2020-05-09 16:55 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 9: ಪಾದರಾಯನಪುರದ ಕೊರೋನ ವೈರಸ್ ಸೋಂಕಿತ ಮಹಿಳೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.

ಗುರುವಾರದಂದು ಪಾದರಾಯನಪುರದ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಮಹಿಳೆಯನ್ನು ಆಸ್ಪತ್ರೆ ಸಿಬ್ಬಂದಿ ಕೊರೋನ ಟೆಸ್ಟ್ ಗೆ ಒಳಪಡಿಸಿದಾಗ ವರದಿ ಪಾಸಿಟಿವ್ ಬಂದಿತ್ತು. ಬಳಿಕ ಮಹಿಳೆಯನ್ನು ಆಸ್ಪತ್ರೆಯಲ್ಲೇ ಐಸೋಲೇಟ್ ಮಾಡಲಾಗಿತ್ತು.

ಶುಕ್ರವಾರದಂದು ಆಸ್ಪತ್ರೆಯಲ್ಲಿ ಮಹಿಳೆಗೆ ಸ್ಕ್ಯಾನ್ ಮಾಡಿದಾಗ ಅವಳಿ ಮಕ್ಕಳಿರುವುದು ಪತ್ತೆಯಾಗಿತ್ತು. ಶನಿವಾರ ಮಹಿಳೆಗೆ ಸಿಜೇರಿಯನ್ ಮಾಡಿ ಹೆರಿಗೆ ಮಾಡಿಸಲಾಗಿದೆ. ಸದ್ಯ ಎರಡು ದಿನ ಆಕೆಯನ್ನು ಐಸೋಲೇಷನ್‍ನಲ್ಲಿ ಇರಿಸಲಾಗುತ್ತದೆ.

ಮಹಿಳೆಯನ್ನು ಪಕ್ಕದ ವಿಕ್ಟೋರಿಯಾಗೆ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ. ಆದರೆ, ಅವಳಿ ಮಕ್ಕಳನ್ನು ಕೆಲ ದಿನಗಳು ವಾಣಿ ವಿಲಾಸದಲ್ಲೇ ಇರಿಸಲಾಗುತ್ತದೆ. ಹಾಲುಣಿಸಲು ಮಾತ್ರ ಆಕೆಯ ಬಳಿ ಕರೆದುಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚಿಕನ್ ಮಾರಾಟಗಾರನಿಗೆ ಕೊರೋನ ಪಾಸಿಟಿವ್: ಶಿವಾಜಿನಗರದಲ್ಲಿ ಚಿಕನ್ ಮಾರಾಟಗಾರರೊಬ್ಬರಿಗೆ ಕೊರೋನ ವೈರಸ್ ಸೋಂಕು ಪತ್ತೆಯಾಗಿದೆ. ಅವರಿಗೆ ಸೋಂಕು ಇರುವುದು ಶನಿವಾರ ವರದಿಯಲ್ಲಿ ಖಚಿತವಾಗಿದ್ದು, ಅವರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲಾಗುತ್ತಿದೆ. ಬಿಬಿಎಂಪಿ ಅಧಿಕಾರಿಗಳು, ಸೋಂಕಿತ ಕೆಲಸ ಮಾಡುತ್ತಿದ್ದ ಚಿಕನ್ ಸೆಂಟರ್ ಗೆ ಬೀಗ ಹಾಕಿಸಿದ್ದಾರೆ. ಆದರೆ, ಸೋಂಕಿತನಿಂದ ಚಿಕನ್ ಖರೀದಿಸಿದವರು ಯಾರೂ ಸಹ ಮುಂದೆ ಬಂದಿಲ್ಲ. ಹೀಗಾಗಿ ಅವರ ಬಗ್ಗೆ ಆರೋಗ್ಯ ಇಲಾಖೆ ಶಿವಾಜಿನಗರದಲ್ಲಿ ತಪಾಸಣೆ ನಡೆಸುತ್ತಿದೆ.

6 ಮಂದಿ ಆಸ್ಪತ್ರೆಗೆ ಸ್ಥಳಾಂತರ: ಪಾದರಾಯನಪುರದಲ್ಲಿ ಶನಿವಾರ ಒಟ್ಟು 7 ಕೊರೋನ ಪಾಸಿಟಿವ್ ಪತ್ತೆಯಾಗಿವೆ. ಕ್ವಾರಂಟೈನ್ ಪ್ರದೇಶದಲ್ಲಿದ್ದ 6 ಮಂದಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಇವರಲ್ಲಿ ನಾಲ್ವರು ಪಾದರಾಯನಪುರದ ರೋಗಿ ನಂ: 454ರ ಪ್ರಾಥಮಿಕ ಸಂಪರ್ಕದಲ್ಲಿದ್ದವರು. ಕ್ವಾರಂಟೈನ್‍ನಲ್ಲಿದ್ದ ಈ ಮೂವರು ಪುರುಷರು ಹಾಗೂ ಒಬ್ಬರು ಮಹಿಳೆಗೆ ಕೊರೋನ ಸೋಂಕು ತಗುಲಿದೆ. 40 ವರ್ಷದ ವ್ಯಕ್ತಿ, 24 ವರ್ಷದ ಯುವಕ, 46 ವರ್ಷದ ವ್ಯಕ್ತಿ ಹಾಗೂ 19 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.

ರೋಗಿ ನಂ. 449ರಿಂದ ಮತ್ತಿಬ್ಬರಿಗೆ ಕೊರೋನ ಸೋಂಕು ತಗುಲಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಇಬ್ಬರು ಮಹಿಳೆಯರ (P-761, P-775) ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಸದ್ಯ ಈ ಆರು ಮಂದಿ ಸೋಂಕಿತರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News