ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಜಗಳ ವಿದೇಶಿ ಪ್ರಜೆಯ ಕೊಲೆಯಲ್ಲಿ ಅಂತ್ಯ

Update: 2020-05-09 12:40 GMT

ಬೆಂಗಳೂರು, ಮೇ 9: ಕ್ಷುಲ್ಲಕ ಕಾರಣಕ್ಕಾಗಿ ವಿದೇಶಿ ಪ್ರಜೆಯೋರ್ವನನ್ನು ಕೊಲೆಗೈದಿರುವ ಘಟನೆ ಇಲ್ಲಿನ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೈಜೀರಿಯಾ ದೇಶದ ಪ್ರಜೆ ಜಾನ್ ಸಂಡೆ(30) ಕೊಲೆಯಾಗಿದ್ದು, ಕೃತ್ಯವೆಸಗಿದ ಆರೋಪಿ ಮನೋಜ್ ಕೂಡ ಗಂಭೀರ ಗಾಯಗೊಂಡು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಾನ್ ಸಂಡೆ ಹಾಗೂ ಮನೋಜ್ ಸ್ನೇಹಿತರಾಗಿದ್ದಾರೆ. ಅವರಿಬ್ಬರ ನಡುವೆ ಯಾವ ವಿಷಯಕ್ಕೆ ಜಗಳ ಉಂಟಾಗಿದೆ ಎಂಬುದು ತಿಳಿದುಬಂದಿಲ್ಲ. ವ್ಯಾಪಾರಿ ವೀಸಾದಡಿ ನೈಜೀರಿಯಾದಿಂದ ಭಾರತಕ್ಕೆ ಬಂದು ಬಟ್ಟೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಾನ್ ಸಂಡೆ ಕಾಚರಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮತ್ತೋರ್ವ ಸ್ನೇಹಿತನ ಮನೆಗೆ ಶುಕ್ರವಾರ ರಾತ್ರಿ ಹೋಗಿದ್ದಾರೆ ಎನ್ನಲಾಗಿದೆ.

ಅಲ್ಲಿ ಮನೋಜ್ ಕೂಡ ಇದ್ದು, ಮದ್ಯ ಸೇವನೆ ಮಾಡಿದ್ದಾರೆ. ಯಾವುದೋ ಕ್ಷುಲ್ಲಕ ವಿಷಯಕ್ಕೆ ಜಗಳ ನಡೆದಿದ್ದು, ಮೊದಲಿಗೆ ಜಾನ್ ತನ್ನ ಬಳಿಯಿದ್ದ ಚಾಕುವಿನಿಂದ ಮನೋಜ್‍ನ ಹೊಟ್ಟೆಗೆ ಇರಿದಿದ್ದಾನೆ. ತಕ್ಷಣ ಮನೋಜ್ ಅದೇ ಚಾಕುವಿನಿಂದ ಜಾನ್‍ಗೆ ಇರಿದಿದ್ದು, ತೀವ್ರ ರಕ್ತಸ್ರಾವದಿಂದ ಆತ ಮೃತಪಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಸ್ಥಳೀಯರ ನೆರವಿನಿಂದ ಮನೋಜ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಪರಿಸ್ಥಿತಿ ಗಂಭೀರವಾಗಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿಷಯ ತಿಳಿದ ಬಾಣಸವಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News