ಬೆಂಗಳೂರು: ಅವಾಚ್ಯ ಶಬ್ದಗಳಿಂದ ನಿಂದಿಸಿ ಯುವಕರಿಬ್ಬರ ಮೇಲೆ ಹಲ್ಲೆಗೈದ ಪೊಲೀಸರು; ವಿಡಿಯೋ ವೈರಲ್
ಓರ್ವ ವಶಕ್ಕೆ, ಪೊಲೀಸರಿಗಾಗಿ ಹುಡುಕಾಟ: ಡಿಸಿಪಿ
ಬೆಂಗಳೂರು, ಮೇ.9: ರಾಜಧಾನಿ ಬೆಂಗಳೂರಿನಲ್ಲಿ ಯುವಕರಿಬ್ಬರನ್ನು ಗುರಿಯಾಗಿಸಿಕೊಂಡು, ಪೊಲೀಸ್ ಸಿಬ್ಬಂದಿ ಗಂಭೀರ ಹಲ್ಲೆ ನಡೆಸಿ, ನಿಂದಿಸಿರುವ ಘಟನೆಗೆ ಸಂಬಂಧಿಸಿದಂತೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.
ನಗರದ ಪಾದರಾಯನಪುರ ನಿವಾಸಿಗಳಾದ ಮುಹಮ್ಮದ್ ಶಾಹೀದ್(18) ಹಾಗೂ ಹುಸೈಫ್ ಎಂಬುವರ ಮೇಲೆ ಇಲ್ಲಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಘಟನಾ ಸ್ಥಳದಲ್ಲಿಯೇ ಗುಂಪು ಹಲ್ಲೆಗೂ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಠಾಣೆಗೆ ದೂರು: ಶುಕ್ರವಾರ ಬೆಳಗ್ಗೆ ಇಲ್ಲಿನ ಜಕ್ಕೂರು ಜಂಕ್ಷನ್ ಬಳಿ ಸ್ನೇಹಿತ ಯಾಸರ್ ಎಂಬಾತನನ್ನು ಮುಹಮ್ಮದ್ ಶಾಹೀದ್ ಹಾಗೂ ಹುಸೈಫ್ ಭೇಟಿ ಮಾಡಲು ಸ್ಕೂಟರ್ ನಲ್ಲಿ ತೆರಳಿದ್ದರು. ಈ ಸಂದರ್ಭದಲ್ಲಿ ಸಹಕಾರ ನಗರದಲ್ಲಿ ಕೆಲ ಯುವಕರು ಬೈಕ್ ಗಳಲ್ಲಿ ವೀಲ್ಹಿಂಗ್ ಮಾಡುತ್ತಿದ್ದು, ಅವರನ್ನು ಸಾರ್ವಜನಿಕರು ಹಿಡಿಯಲು ಮುಂದಾಗಿದ್ದಾರೆ. ಇದೇ ಮಾರ್ಗವಾಗಿ ಈ ಇಬ್ಬರನ್ನು ನೋಡಿದ ಕೆಲವರು, ಇವರು ಸಹ ವೀಲ್ಹಿಂಗ್ ಮಾಡಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ಹಿಡಿಯಲು ಮುಂದಾಗಿದ್ದಾರೆ.
ಈ ವೇಳೆ ಗಾಬರಿಗೊಂಡ ಮುಹಮ್ಮದ್ ಶಾಹೀದ್ ಹಾಗೂ ಹುಸೈಫ್, ಸ್ಕೂಟರ್ ಚಾಲನೆ ಮಾಡಿಕೊಂಡು ತೆರಳಿದಾಗ, ಕೊಡಿಗೇಹಳ್ಳಿ ಪೊಲೀಸ್ ಠಾಣೆಯ ಇಬ್ಬರು ಪೇದೆಗಳು ಇವರನ್ನು ಹಿಡಿದು, ಮರದ ದೊಣ್ಣೆ ಮತ್ತು ಕಾಲಿನಿಂದ ಒದ್ದು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಗಾಯಾಳು ಮುಹಮ್ಮದ್ ಶಾಹೀದ್ ನೀಡಿರುವ ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಅಷ್ಟೇ ಅಲ್ಲದೆ, ಅಲ್ಲಿದ್ದ ಸಾರ್ವಜನಿಕರು ಹಲ್ಲೆ ನಡೆಸುವಂತೆ ಪೊಲೀಸರೇ ಸಹಾಯ ಮಾಡಿದ್ದಾರೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡಿದ್ದ ಮುಹಮ್ಮದ್ ಶಾಹೀದ್ ಮತ್ತು ಹುಸೈಫ್, ಕೆಸಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಶನಿವಾರ ಇಲ್ಲಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ವಿಡಿಯೋ ವೈರಲ್
ಯುವಕರಿಬ್ಬರನ್ನು ಗುರಿಯಾಗಿಸಿಕೊಂಡು ಹಲ್ಲೆ ನಡೆಸಿರುವ ಪೇದೆಗಳ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಉದ್ದೇಶ ಪೂರ್ವಕವಾಗಿ ಆವಾಚ್ಯ ಶಬ್ದಗಳಿಂದ ನಿಂದಿಸಿ, ಗಂಭೀರ ಹಲ್ಲೆ ನಡೆಸಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆ ಆಗಿವೆ.
ಬಂಧಿಸಿ, ತನಿಖೆ ನಡೆಸಬೇಕು.
ಘಟನೆ ಸಂಬಂಧ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಆದರೆ, ಇಲ್ಲಿನ ಪೊಲೀಸ್ ಪೇದೆಗಳೇ ಯುವಕರನ್ನು ಗುರಿಯಾಗಿಸಿಕೊಂಡು ದಂಡಿಸಿರುವುದು ಸೂಕ್ತ ಕ್ರಮವಲ್ಲ. ಈ ಸಂಬಂಧ ಪೊಲೀಸ್ ಪೇದೆಗಳನ್ನು ಈ ಕೂಡಲೇ ಬಂಧಿಸಿ, ಉನ್ನತ ತನಿಖೆ ನಡೆಯಬೇಕು.
-ಇಮ್ರಾನ್ ಪಾಷಾ, ಬಿಬಿಎಂಪಿಯ ಜೆಡಿಎಸ್ ಸದಸ್ಯ
ನಾವು ತಪ್ಪು ಮಾಡಿಲ್ಲ: ಮುಹಮ್ಮದ್ ಶಾಹೀದ್
ನಾವು ವೀಲ್ಹಿಂಗ್ ಮಾಡಿಲ್ಲ. ಆದರೂ, ನಮ್ಮ ಮೇಲೆ ಪೊಲೀಸರು ನಮ್ಮ ಮೇಲೆ ಉದ್ದೇಶ ಪೂರ್ವಕವಾಗಿಯೇ ಹಲ್ಲೆ ನಡೆಸಿದರು. ಕ್ಷಮೆಯಾಚಿಸಿದರೂ, ಚಿತ್ರಹಿಂಸೆ ನೀಡಿದರು ಎಂದು ದೂರುದಾರ ಮುಹಮ್ಮದ್ ಶಾಹೀದ್ ಕಣ್ಣೀರು ಹಾಕಿದರು.ಓರ್ವ ವಶಕ್ಕೆ, ಪೊಲೀಸರಿಗಾಗಿ ಹುಡುಕಾಟ:ಡಿಸಿಪಿ
ಯುವಕರಿಬ್ಬರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ ದುಷ್ಕರ್ಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ, ವಿಡಿಯೊ ದೃಶ್ಯದಲ್ಲಿರುವ ಪೊಲೀಸ್ ಸಿಬ್ಬಂದಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಗಾಯಾಳು ಯುವಕರನ್ನು ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಹೊಯ್ಸಳ ವಾಹನದ ಸಿಬ್ಬಂದಿ ಕರೆತಂದಿದ್ದರು. ತಪ್ಪಿತಸ್ಥರು ಎನ್ನಲಾದ ಪೇದೆಗಳಿಗಾಗಿ ಹುಡುಕಾಟ ನಡೆಸಲಾಗಿದೆ.
-ಭೀಮಶಂಕರ್ ಗುಳೇದ್, ಡಿಸಿಪಿ, ಈಶಾನ್ಯ ವಿಭಾಗ