ಸಿಗರೇಟ್ ಡೀಲರ್ ಗಳಿಂದ ಲಂಚ ಸ್ವೀಕಾರ ಆರೋಪ: ಇಬ್ಬರು ಪೊಲೀಸ್ ಇನ್ಸ್ ಪೆಕ್ಟರ್ ಗಳ ಅಮಾನತು

Update: 2020-05-09 16:08 GMT

ಬೆಂಗಳೂರು, ಮೇ 9: ಸಿಗರೇಟ್ ಡೀಲರ್ ಗಳಿಂದ ಲಂಚ ಸ್ವೀಕರಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಗಳನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅಮಾನತುಗೊಳಿಸಿದ್ದಾರೆ.

ಅಜಯ್ ಹಾಗೂ ನಿರಂಜನ್ ಕುಮಾರ್ ಅಮಾನತು ಆಗಿರುವ ಸಿಸಿಬಿ ಪೊಲೀಸ್ ಇನ್ಸ್‍ಪೆಕ್ಟರ್ ಗಳು ಎಂದು ತಿಳಿದುಬಂದಿದೆ.

ಪ್ರಕರಣ ಮುಚ್ಚಿಹಾಕಲು ಎಸಿಪಿ ಪ್ರಭುಶಂಕರ್ ಸೇರಿದಂತೆ ಮೂವರು ಸೇರಿ ಹಣ ಪಡೆದಿದ್ದು ಸಾಬೀತಾಗುತ್ತಿದ್ದಂತೆ, ಎಸಿಪಿ ಪ್ರಭುಶಂಕರ್ ಅವರನ್ನು ಸಿಸಿಬಿಯಿಂದ ವರ್ಗಾಯಿಸಲಾಗಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಇಬ್ಬರು ಇನ್ಸ್‍ಪೆಕ್ಟರ್ ಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಪ್ರಕರಣ?: ಲಾಕ್‍ಡೌನ್ ವೇಳೆ ಸಿಗರೇಟ್ ಸರಬರಾಜಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಪ್ರತಿಷ್ಠಿತ ಕಂಪೆನಿಗಳ ವಿತರಕರಿಂದ 62.5 ಲಕ್ಷ ರೂ. ಲಂಚ ಪಡೆದು ಸಿಕ್ಕಿಹಾಕಿಕೊಂಡ ಸಿಸಿಬಿ ಎಸಿಪಿ ಪ್ರಭುಶಂಕರ್ 25 ಲಕ್ಷ ಹಣವನ್ನು ಹಿರಿಯ ಅಧಿಕಾರಿಗಳಿಗೆ ತಂದೊಪ್ಪಿಸಿದ ಪ್ರಕರಣ ಶುಕ್ರವಾರ ಬೆಳಕಿಗೆ ಬಂದಿತ್ತು ಎನ್ನಲಾಗಿದೆ.

ಈ ಲಂಚ ಪ್ರಕರಣ ಕುರಿತು ವಿಚಾರಣೆ ನಡೆಸಿದ ಸಿಸಿಬಿ ಡಿಸಿಪಿ ರವಿಕುಮಾರ್ ಅವರು, ಎಸಿಪಿ ಪ್ರಭುಶಂಕರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿ ಎಂಟು ಪುಟಗಳ ವರದಿ ನೀಡಿದ್ದರು. ಈ ವರದಿಯನ್ನು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಕಳುಹಿಸಿದ್ದಾರೆ. ಅಲ್ಲಿಂದ ಅದು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ರವಾನೆಯಾಗಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News