ಸಿನೆಮಾ ಚಿತ್ರೀಕರಣಕ್ಕೆ ಅವಕಾಶವಿಲ್ಲ: ಸಚಿವ ಆರ್.ಅಶೋಕ್
ಬೆಂಗಳೂರು, ಮೇ 10: ಸಿನೆಮಾಗಳ ಚಿತ್ರೀಕರಣಕ್ಕೆ ಸದ್ಯಕ್ಕೆ ಅನುಮತಿ ಇಲ್ಲ. ಆದರೆ, ಡಬ್ಬಿಂಗ್, ಎಡಿಟಿಂಗ್, ಗ್ರಾಫಿಕ್ಸ್, ರೀರೆಕಾರ್ಡಿಂಗ್ ಮುಂತಾದ ಚಟುವಟಿಕೆಗಳನ್ನು ಕೋವಿಡ್-19 ಮಾರ್ಗಸೂಚಿಗಳಿಗನುಸಾರವಾಗಿ ಮಾಡಿಕೊಳ್ಳಬಹುದಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಯದರ್ಶಿ ಕೆ.ಮಂಜು ಸೇರಿದಂತೆ ಸಿನೆಮಾ ರಂಗದ ವಿವಿಧ ಮುಖ್ಯಸ್ಥರ ಜತೆ ಮಾತುಕತೆ ನಡೆಸಿದ ನಂತರ ಮಾತನಾಡಿದ ಅವರು, ಸಿನೆಮಾಗಳ ಚಿತ್ರೀಕರಣವನ್ನು ಹೊರತು ಪಡಿಸಿ ಉಳಿದ ಎಲ್ಲ ಚಟುವಟಿಕೆಗಳಿಗೆ ಸರಕಾರ ಅನುಮತಿ ನೀಡಿದೆ. ಇದನ್ನು ಅತ್ಯಂತ ಜಾಗ್ರತೆಯಿಂದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಸರಕಾರಕ್ಕೆ ಧನ್ಯವಾದ: ಚಿತ್ರೀಕರಣ ಬಿಟ್ಟು ಉಳಿದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿರುವ ರಾಜ್ಯ ಸರಕಾರಕ್ಕೆ ಚಿತ್ರರಂಗದ ಪರವಾಗಿ ಧನ್ಯವಾದ ಅರ್ಪಿಸುವುದಾಗಿ ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ತಿಳಿಸಿದ್ದಾರೆ. ಈ ವೇಳೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎ.ಗಣೇಶ್, ಚಲನಚಿತ್ರ ಕಾರ್ಮಿಕ ಒಕ್ಕೂಟದ ಉಪಾಧ್ಯಕ್ಷ ರವಿಶಂಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.